HEALTH TIPS

ನೌಗಾಮ್ ಸ್ಫೋಟ ಪ್ರಕರಣ: ವಸತಿ ಪ್ರದೇಶದಲ್ಲಿಯ ಪೋಲಿಸ್ ಠಾಣೆಯಲ್ಲಿ 2,900 ಕೆ.ಜಿ ಸ್ಫೋಟಕಗಳ ದಾಸ್ತಾನು ಪ್ರಶ್ನಿಸಿದ ತಜ್ಞರು, ನಾಯಕರು

ಶ್ರೀನಗರ: ಜನನಿಬಿಡ ಪ್ರದೇಶದಲ್ಲಿರುವ ನೌಗಾಮ್ ಪೋಲಿಸ್ ಠಾಣೆಯಲ್ಲಿ ಸುಮಾರು 2,900 ಕೆ.ಜಿ.ಗಳಷ್ಟು ಸ್ಫೋಟಕಗಳನ್ನು ದಾಸ್ತಾನಿರಿಸಿದ್ದ ಬಗ್ಗೆ ಭದ್ರತಾ ತಜ್ಞರು ಮತ್ತು ರಾಜಕೀಯ ನಾಯಕರು ಗಂಭೀರ ಪ್ರಶ್ನೆಗಳನ್ನೆತ್ತಿದ್ದಾರೆ. ಶನಿವಾರ ಸಂಜೆ ಈ ಸ್ಫೋಟಕಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸುತ್ತಿದ್ದಾಗ ಭೀಕರ ಸ್ಫೋಟ ಸಂಭವಿಸಿ ಒಂಭತ್ತು ಜನರು ಮೃತಪಟ್ಟಿದ್ದರು ಮತ್ತು 32 ಜನರು ಗಾಯಗೊಂಡಿದ್ದರು.

ಸ್ಫೋಟಕಗಳನ್ನು ಎಂದೂ ಜನವಸತಿ ಪ್ರದೇಶಗಳಲ್ಲಿ ದಾಸ್ತಾನು ಮಾಡಬಾರದು ಎಂದು ಹೇಳಿದ ಮಾಜಿ ಜಮ್ಮುಕಾಶ್ಮೀರ ಪೋಲಿಸ್ ಮುಖ್ಯಸ್ಥ ಎಸ್.ಪಿ.ವೈದ್ ಅವರು, 'ಸ್ಥಾಪಿತ ಮಾರ್ಗಸೂಚಿಗಳ ಪ್ರಕಾರ ಸ್ಫೋಟಕ ವಸ್ತುಗಳನ್ನು ಪ್ರತ್ಯೇಕ ಮತ್ತು ಸುರಕ್ಷಿತ ಸ್ಥಳದಲ್ಲಿ ಇರಿಸಬೇಕು. ಈ ಪ್ರಕರಣದಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಲಾಗಿತ್ತೇ ಎನ್ನುವುದು ನನಗೆ ತಿಳಿದಿಲ್ಲ' ಎಂದರು.

ಪೋಲಿಸ್ ಠಾಣೆಯಲ್ಲಿ ಇರಿಸಲಾಗಿದ್ದ ಅಮೋನಿಯಂ ನೈಟ್ರೇಟ್ ಅತ್ಯಂತ ಸೂಕ್ಷ್ಮವಾಗಿದ್ದು, ಸುಲಭವಾಗಿ ಸ್ಫೋಟಿಸಬಹುದು. ಅದು ನೀರು ಅಥವಾ ಬೆಂಕಿಯ ಕಿಡಿಯ ಸಂಪರ್ಕಕ್ಕೆ ಬಂದರೆ ಸ್ಫೋಟಗೊಳ್ಳಬಹುದು. ಅದನ್ನು ಸೀಲ್ ಮಾಡುವಾಗ ಬೆಂಕಿ ಕಡ್ಡಿ ಗೀರಿದರೂ ಸ್ಫೋಟಗೊಳ್ಳುತ್ತದೆ ಎಂದು ಅವರು ಹೇಳಿದರು.

ಅಂತರರಾಜ್ಯ ʼವೈಟ್-ಕಾಲರ್ ಭಯೋತ್ಪಾದಕ ಜಾಲʼವನ್ನು ಭೇದಿಸಿದ ಬಳಿಕ ವಶಪಡಿಸಿಕೊಳ್ಳಲಾಗಿದ್ದ ಸುಮಾರು 2,900 ಕೆ.ಜಿ.ಅಮೋನಿಯಂ ನೈಟ್ರೇಟ್‌ನ್ನು ಮೂಲ ಪ್ರಕರಣ ದಾಖಲಾಗಿದ್ದ ನೌಗಾಮ್ ಪೋಲಿಸ್ ಠಾಣೆಯಲ್ಲಿ ಇರಿಸಲಾಗಿತ್ತು.

'ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಫೋಟಕಗಳನ್ನು ಯಾವ ಸಂದರ್ಭದಲ್ಲಿ ಇಲ್ಲಿ ತಂದು ದಾಸ್ತಾನಿರಿಸಲಾಗಿತ್ತು ಮತ್ತು ಅವುಗಳನ್ನು ಹೇಗೆ ನಿರ್ವಹಿಸಲಾಗುತ್ತಿತ್ತು ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುವ ಭರವಸೆ ನಮಗಿದೆ' ಎಂದು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿದರು.

ಜನನಿಬಿಡ ಪ್ರದೇಶದಲ್ಲಿ ನಾಲ್ಕು ದಿನಗಳ ಕಾಲ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಮೋನಿಯಂ ನೈಟ್ರೇಟ್ ದಾಸ್ತಾನಿರಿಸಿದ್ದೇಕೆ ಎಂದು ಪ್ರಶ್ನಿಸಿದ ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಅವರು, ಇದು ಪೋಲಿಸರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಹೇಳಿದರು.

ಸ್ಯಾಂಪಲ್‌ಗಳ ಸಂಗ್ರಹಣೆ ಸಮಯದಲ್ಲಿ ನಾಗರಿಕರ ಉಪಸ್ಥಿತಿಯನ್ನು ಟೀಕಿಸಿದ ಮುಫ್ತಿ, ಅಮೋನಿಯಂ ನೈಟ್ರೇಟ್ ಅನ್ನು ಹೇಗೆ ಸೀಲ್ ಮಾಡುವುದು ಎನ್ನುವುದು ಗೊತ್ತಿರದಿದ್ದ ನಾಯಿಬ್ ತಹಶೀಲ್ದಾರ್ ಸೇರಿದಂತೆ ನಾಗರಿಕರನ್ನು ಠಾಣೆಗೆ ಏಕೆ ಕರೆಸಲಾಗಿತ್ತು? ಇದು ಅತ್ಯಂತ ಅಪಾಯಕಾರಿಯಾಗಿತ್ತು ಮತ್ತು ಸಂಭವಿಸಲು ಕಾಯುತ್ತಿದ್ದ ಆಕಸ್ಮಿಕವಾಗಿತ್ತು ಎಂದರು.

ಘಟನೆಯನ್ನು 'ದೊಡ್ಡ ಲೋಪ' ಎಂದು ಬಣ್ಣಿಸಿದ ನ್ಯಾಷನಲ್ ಕಾನ್ಫರೆನ್ಸ್ ಸಂಸದ ರುಹುಲ್ಲಾ ಮೆಹ್ದಿ ಅವರು, ಸಮಗ್ರ ತನಿಖೆಗೆ ಆಗ್ರಹಿಸಿದರು.

ಬಿಜೆಪಿ ನಾಯಕ ರವೀಂದ್ರ ರೈನಾ ಕೂಡ ಘಟನೆಯ ಕುರಿತು ವಿವರವಾದ ತನಿಖೆಗೆ ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries