HEALTH TIPS

ಉನ್ನತ ನ್ಯಾಯಾಂಗ ಸೇವೆಗೆ ಬಡ್ತಿ ಪಡೆಯಬಯಸುವ ನ್ಯಾಯಾಧೀಶರಿಗೆ ಕೋಟಾ ಅಸಾಧ್ಯ:ಸುಪ್ರೀಂ

ನವದೆಹಲಿ: ಉನ್ನತ ನ್ಯಾಯಾಂಗ ಸೇವೆಗೆ ಬಡ್ತಿ ಪಡೆಯಬಯಸುವ ಕೆಳಹಂತದ ನ್ಯಾಯಾಧೀಶರಿಗೆ ಕೋಟಾ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.

ಉನ್ನತ ನ್ಯಾಯಾಂಗ ಸೇವೆಯಲ್ಲಿ ಬಡ್ತಿ ಎಂಬುದು ಅವರ ಅರ್ಹತೆ ಮತ್ತು ಸೇವಾ ಜೇಷ್ಠತೆಯನ್ನು ಅವಲಂಬಿಸಿದೆಯೇ ಹೊರತು, ನ್ಯಾಯಾಂಗದ ಕೆಳ ಹಂತಗಳಲ್ಲಿನ ಸೇವಾವಧಿ ಅಥವಾ ಕಾರ್ಯಕ್ಷಮತೆಯನ್ನು ಅವಲಂಬಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಪೀಠವು ಹೇಳಿದೆ.‌

ನ್ಯಾಯಾಂಗದ ಅಧಿಕಾರಿಗಳಿಗೆ ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಪಡೆಯಲು ಸಾಕಷ್ಟು ಅವಕಾಶಗಳಿವೆ. ಜಿಲ್ಲಾ ನ್ಯಾಯಾಧೀಶರಾಗಿ ನೇರ ನೇಮಕಾತಿಗೆ ಸ್ಪರ್ಧಿಸಲು ಅವಕಾಶ ನೀಡುತ್ತದೆ. ಉನ್ನತ ನ್ಯಾಯಾಂಗ ಸೇವೆಯಲ್ಲಿರುವ ಆಯ್ಕೆ ದರ್ಜೆ ಮತ್ತು ಸೂಪರ್‌ ಟೈಂ ಸ್ಕೇಲ್‌ನಲ್ಲಿನ ಸ್ಥಿರೀಕರಣವು ಕೇಡರ್‌ನೊಳಗಿನ ಅರ್ಹತೆ ಮತ್ತು ಹಿರಿತವನ್ನು ಆಧರಿಸಿದೆ. ಉನ್ನತ ನ್ಯಾಯಾಂಗ ಸೇವೆಗೆ ಬಡ್ತಿ ಪಡೆದಲ್ಲಿ ಆರ್‌ಪಿ ಮತ್ತು ಎಲ್‌ಡಿಸಿಇಗಳು ತಮ್ಮ ಮಹತ್ವ ಕಳೆದುಕೊಳ್ಳಲಿವೆ. ಅದರಿಂದ ನ್ಯಾಯದ, ದಕ್ಷ ಆಡಳಿತ ನೀಡುವ ನ್ಯಾಯಾಂಗದ ಉದ್ದೇಶ ಈಡೇರುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

'ಸಿವಿಲ್ ನ್ಯಾಯಾಧೀಶರ ಸೇವಾವಧಿ ಮತ್ತು ಕಾರ್ಯಕ್ಷಮತೆಯು ಜಿಲ್ಲಾ ನ್ಯಾಯಾಧೀಶರ ಸಾಮಾನ್ಯ ಕೇಡರ್‌ನಲ್ಲಿ ವರ್ಗೀಕರಿಸಲು ಸಾಧ್ಯವಿಲ್ಲ. ಜತೆಗೆ ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ವರ್ಗೀಕರಣವು ವಿಭಿನ್ನ ನೆಲೆಯನ್ನು ಹೊಂದಿರಲಿದೆ' ಎಂದು ಪೀಠ ಹೇಳಿದೆ.

'ವೈಯಕ್ತಿಕ ವೃತ್ತಿ ಆಕಾಂಕ್ಷೆಗಳು ಯಾವುದೇ ವೃತ್ತಿಯಲ್ಲಿ ಸಾಮಾನ್ಯ. ಆದರೆ ಅದು ವ್ಯಕ್ತಿಯ ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ. ಹೀಗಾಗಿ ಅವು ಸ್ವತಂತ್ರ ಮತ್ತು ಸದೃಢ ನ್ಯಾಯಾಂಗದ ಉದ್ದೇಶಕ್ಕೆ ಸಂಬಂಧಿಸಿದ್ದಲ್ಲ. ಜತೆಗೆ ಹಿರಿತನಕ್ಕಿರುವ ನಿಯಮಗಳಿಗೆ ಸೂತ್ರವಾಗಲಾರವು' ಎಂದೂ ಪೀಠ ಅಭಿಪ್ರಾಯಪಟ್ಟಿದೆ.

ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ ನಡೆಯುವ ನೇಮಕಾತಿಗೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಲ್ಲಿ ಉನ್ನತ ನ್ಯಾಯಾಂಗ ಸೇವೆಯಲ್ಲಿರುವ ಅಧಿಕಾರಿಗಳ ಹಿರಿತನವನ್ನು ವಾರ್ಷಿಕ 4 ಅಂಕಗಳ ರೋಸ್ಟರ್‌ ಮೂಲಕ ನಿರ್ಧರಿಸಲಾಗುತ್ತದೆ. ಆಯಾ ವರ್ಷದಲ್ಲಿ ನೇಮಕಗೊಂಡ ಎಲ್ಲಾ ಅಧಿಕಾರಿಗಳಿಂದ ಇಬ್ಬರು ನಿಯಮಿತ ಬಡ್ತಿ ಹೊಂದಿದವರು, ಒಬ್ಬರು ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಗಳ (LDCEs) ಮೂಲಕ ಬಡ್ತಿ ಪಡೆದವರು ಮತ್ತು ಒಬ್ಬರು ನೇರ ನೇಮಕಾತಿಗಳ ಪುನರಾವರ್ತಿತ ಅನುಕ್ರಮದಲ್ಲಿ ನೇಮಕಾತಿ ಹೊಂದಿದವರು ಎಂದು ಹೇಳಿದೆ.

1989 ರಲ್ಲಿ ಅಖಿಲ ಭಾರತ ನ್ಯಾಯಾಧೀಶರ ಸಂಘ (AIJA) ಸಲ್ಲಿಸಿದ ಅರ್ಜಿಯಲ್ಲಿ ದೇಶದಾದ್ಯಂತ ನ್ಯಾಯಾಂಗ ಅಧಿಕಾರಿಗಳ ಹಿರಿತನ ಮತ್ತು ಬಡ್ತಿ ವಿಷಯವು ಪ್ರಸ್ತಾಪವಾಗಿತ್ತು. ದೇಶದಾದ್ಯಂತ ಕೆಳಹಂತದ ನ್ಯಾಯಾಂಗ ಅಧಿಕಾರಿಗಳು ಎದುರಿಸುತ್ತಿರುವ ವೃತ್ತಿ ಅಸ್ಥಿರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉನ್ನತ ನ್ಯಾಯಾಲಯವು ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries