HEALTH TIPS

ಬಿಹಾರದ ಶೇ.42ರಷ್ಟು ನೂತನ ಚುನಾಯಿತ ಶಾಸಕರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ: ವರದಿ

ಪಾಟ್ನಾ,: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಿಜೇತ ಎಲ್ಲ 243 ಅಭ್ಯರ್ಥಿಗಳ ಚುನಾವಣಾ ಅಫಿಡವಿಟ್ ಗಳನ್ನು ಪರಿಶೀಲಿಸಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಬಿಹಾರ ಎಲೆಕ್ಷನ್ ವಾಚ್ (ಬಿಇಡಬ್ಲ್ಯು) ಶೇ.42ರಷ್ಟು ನೂತನವಾಗಿ ಚುನಾಯಿತರಾಗಿರುವ ಶಾಸಕರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿವೆ.

ಆದಾಗ್ಯೂ 2020ರ ಚುನಾವಣೆಗೆ ಹೋಲಿಸಿದರೆ ಇಂತಹವರ ಸಂಖ್ಯೆ ಇಳಿಕೆಯಾಗಿದೆ. ಆಗ ಶೇ.51ರಷ್ಟು ಶಾಸಕರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರು ಎಂದು ತಿಳಿಸಿವೆ.

'2025ರ ಚುನಾವಣೆಗಳಲ್ಲಿ ಆಯ್ಕೆಯಾಗಿರುವ ಒಟ್ಟು ಶಾಸಕರ ಪೈಕಿ 102 (ಶೇ.42) ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿದ್ದಾರೆ. ಕೊಲೆ,ಕೊಲೆ ಯತ್ನ,ಅಪಹರಣ,ಮಹಿಳೆಯರ ವಿರುದ್ಧ ದೌರ್ಜನ್ಯಗಳು,ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಗಂಭೀರ ಕ್ರಿಮಿನಲ್ ಅಪರಾಧಗಳು ಎಂದು ನಾವು ಪರಿಗಣಿಸಿದ್ದೇವೆ ಹಾಗೂ ಪ್ರತಿಭಟನೆ, ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಯಂತಹ ಅಪರಾಧಗಳನ್ನು ಈ ವರ್ಗದಿಂದ ಹೊರಗಿರಿಸಿದ್ದೇವೆ' ಎಂದು ಎಡಿಆರ್ ಬಿಹಾರ ರಾಜ್ಯ ಸಂಯೋಜಕ ರಾಜೀವ್ ಕುಮಾರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ರಾಜಕೀಯದ ಅಪರಾಧೀಕರಣದ ಗ್ರಾಫ್ ಇಳಿಯುತ್ತಿದ್ದರೂ ಅದರಿಂದ ಸಂತೋಷ ಪಟ್ಟುಕೊಳ್ಳುವಂಥದ್ದೇನೂ ಇಲ್ಲ, ಏಕೆಂದರೆ ಎಲ್ಲ ರಾಜಕೀಯ ಪಕ್ಷಗಳು ಈಗಲೂ ಇಂತಹ ಜನರಿಗೆ ಟಿಕೆಟ್ ಗಳನ್ನು ನೀಡುತ್ತಿವೆ ಮತ್ತು ತನ್ಮೂಲಕ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸುವ ಅವಕಾಶದಿಂದ ಮತದಾರರನ್ನು ವಂಚಿಸುತ್ತಿವೆ ಎಂದು ಹೇಳಿದ ಅವರು, 'ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಟಿಕೆಟ್ ಗಳನ್ನು ನೀಡುವುದನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು. ಆಗ ಮಾತ್ರ ರಾಜಕೀಯವು ಅಪರಾಧೀಕರಣದಿಂದ ಮುಕ್ತಗೊಳ್ಳುತ್ತದೆ ಮತ್ತು ಅದು ನಮ್ಮ ಗುರಿಗಳಲ್ಲೊಂದಾಗಿದೆ ' ಎಂದರು.

ದತ್ತಾಂಶಗಳ ಪ್ರಕಾರ ಆರು ಶಾಸಕರು ತಮ್ಮ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. 19 ಶಾಸಕರು ಕೊಲೆ ಯತ್ನ ಮತ್ತು ಒಂಭತ್ತು ಶಾಸಕರು ಮಹಿಳೆಯರ ವಿರುದ್ಧ ದೌರ್ಜನ್ಯಗಳ ಆರೋಪಗಳನ್ನು ಎದುರಿಸುತ್ತಿದ್ದಾರೆ.

ದೊಡ್ಡ ಪಕ್ಷಗಳ ಪೈಕಿ ಹೊಸದಾಗಿ ಆಯ್ಕೆಯಾಗಿರುವ ಆರ್ಜೆಡಿಯ 25 ಶಾಸಕರ ಪೈಕಿ 14 (ಶೇ.56),ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ರ ಎಲ್ಜೆಪಿ(ಆರ್ವಿ)ಯ 19 ಶಾಸಕರ ಪೈಕಿ 10 (ಶೇ.53),ಕಾಂಗ್ರೆಸ್ನ ಆರು ಶಾಸಕರ ಪೈಕಿ ಮೂವರು(ಶೇ.50),ಬಿಜೆಪಿಯ 89 ಶಾಸಕರ ಪೈಕಿ 43 (ಶೇ.48) ಮತ್ತು ಜೆಡಿಯುದ 85 ಶಾಸಕರ ಪೈಕಿ 23 (ಶೇ.27) ಜನರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಇದೇ ರೀತಿ ವಿಜೇತ ಅಭ್ಯರ್ಥಿಗಳ ಪೈಕಿ ಶೇ.90ರಷ್ಟು ಜನರು ಕೋಟ್ಯಧಿಪತಿಗಳಾಗಿದ್ದು,ಸರಾಸರಿ 9.02 ಕೋ.ರೂ.ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ.

ಭಾರತೀಯ ಚುನಾವಣಾ ಆಯೋಗವು ಚುನಾವಣೆಗಳಲ್ಲಿ ಕೋಟ್ಯಧಿಪತಿಗಳ ಸಮಸ್ಯೆ ಕುರಿತು ಗಮನ ಹರಿಸಬೇಕು. ಅದು ಸಾಮಾನ್ಯ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಗೆಲ್ಲುವ ಅವಕಾಶಗಳನ್ನು ನಿರಾಕರಿಸುತ್ತದೆ,ಅವರಿಗೂ ಸಮಾನ ಸ್ಪರ್ಧೆಯ ಅವಕಾಶವಿರಬೇಕು ಎಂದು ರಾಜೀವ್ ಕುಮಾರ್ ಹೇಳಿದರು.

ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯು ಸುಧಾರಣೆಯತ್ತ ಸಾಗುತ್ತಿದೆ. ಸುಮಾರು ಶೇ.60 ರಷ್ಟು ಚುನಾಯಿತ ಅಭ್ಯರ್ಥಿಗಳು ಪದವಿ ಅಥವಾ ಹೆಚ್ಚಿನ ವಿದ್ಯಾರ್ಹತೆಗಳನ್ನು ಹೊಂದಿದ್ದಾರೆ. ಆದಾಗ್ಯೂ ಸುಮಾರು ಶೇ.35ರಷ್ಟು ಅಭ್ಯರ್ಥಿಗಳು ಐದರಿಂದ 12ನೇ ತರಗತಿವರೆಗೆ ಓದಿದ್ದಾರೆ. ಒಟ್ಟು ಏಳು ಅಭ್ಯರ್ಥಿಗಳು ತಾವು ಕೇವಲ 'ಅಕ್ಷರಸ್ಥರು' ಎಂದು ಘೋಷಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries