ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿರುವ ಈ ಮಸೂದೆಯು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕೆ ಕಡ್ಡಾಯವಾಗಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಿಂದ(ನೀಟ್) ರಾಜ್ಯಕ್ಕೆ ವಿನಾಯಿತಿಯನ್ನು ಒದಗಿಸಲು ಬಯಸಿದೆ.
ಕೇಂದ್ರ ಸರಕಾರದ ಸಲಹೆಯ ಮೇರೆಗೆ ಮತ್ತು ಯಾವುದೇ ಕಾರಣಗಳನ್ನು ನೀಡದೆ ಮಸೂದೆಗೆ ಒಪ್ಪಿಗೆಯನ್ನು ಯಾಂತ್ರಿಕವಾಗಿ ತಡೆಹಿಡಿಯಲಾಗಿದೆ ಎನ್ನುವುದನ್ನು ರಾಜ್ಯಪಾಲರ ಸಚಿವಾಲಯದ ಮಾ.4ರ ಸಂವಹನವು ತೋರಿಸಿದೆ ಎಂದು ತಮಿಳುನಾಡು ಸಲ್ಲಿಸಿರುವ ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ.
ಅರ್ಜಿಯ ಪ್ರಕಾರ, ಕೇಂದ್ರ ಸರಕಾರವು ಎತ್ತಿದ್ದ ಪ್ರತಿಯೊಂದು ಆಕ್ಷೇಪಕ್ಕೂ ರಾಜ್ಯ ಸರಕಾರವು ವಿವರವಾದ ಉತ್ತರಗಳನ್ನು ಒದಗಿಸಿದೆ. ರಾಷ್ಟ್ರಪತಿಗಳ ಕ್ರಮವು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ರಾಜ್ಯವು ಹೇಳಿದೆ. ಅರ್ಜಿಯು ಒಕ್ಕೂಟವಾದ, ಶಾಸಕಾಂಗ ಸ್ವಾಯತ್ತತೆ ಹಾಗೂ ಸಂವಿಧಾನದ 201 ಮತ್ತು 254(2) ವಿಧಿಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಗಣನೀಯ ಪ್ರಶ್ನೆಗಳನ್ನು ಎತ್ತಿದೆ.
2021ರ ಮಸೂದೆಗೆ ಒಪ್ಪಿಗೆಯನ್ನು ತಡೆಹಿಡಿದಿರುವ ರಾಷ್ಟ್ರಪತಿಗಳ ಕ್ರಮವು ಅಸಾಂವಿಧಾನಿಕವಾಗಿದೆ ಮತ್ತು ರದ್ದುಗೊಳಿಸಲು ಅರ್ಹವಾಗಿದೆ ಎಂದು ಘೋಷಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಮಸೂದೆಯು ವಿಧಿ 254(2)ರಡಿ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಿದೆ ಎಂದು ಘೋಷಿಸಲು ಅಥವಾ ಪರ್ಯಾಯವಾಗಿ ಹೊಸದಾಗಿ ಪರಿಗಣನೆಗಾಗಿ ಮಸೂದೆಯನ್ನು ಮತ್ತೆ ರಾಷ್ಟ್ರಪತಿಗಳ ಮುಂದೆ ಮಂಡಿಸಲು ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.




