ಕಲ್ಕತ್ತಾ ಹೈಕೋರ್ಟ್ ಶಮಿ ಅವರು ಪತ್ನಿಗೆ ತಿಂಗಳಿಗೆ 1.5 ಲಕ್ಷ ರೂಪಾಯಿ ಮತ್ತು ಮಗಳಿಗೆ 2.5 ಲಕ್ಷ ರೂಪಾಯಿ ಪಾವತಿಸಬೇಕು ಎಂದು ಆದೇಶಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿರುವ ಹಸೀನ್ ಜಹಾನ್, ಶಮಿ ಅವರ ಆದಾಯ, ಆಸ್ತಿ ಮತ್ತು ಜೀವನಶೈಲಿಯನ್ನು ಪರಿಗಣಿಸಿದರೆ ಈ ಮೊತ್ತ ತುಂಬಾ ಕಡಿಮೆ ಎಂದು ವಾದಿಸಿದ್ದಾರೆ.
ವಿಚಾರಣೆಯ ವೇಳೆ ಪೀಠವು ಶಮಿ ಹಾಗೂ ಪಶ್ಚಿಮ ಬಂಗಾಳ ಸರ್ಕಾರದಿಂದ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿದ್ದು, ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್‌ನಲ್ಲಿ ನಡೆಯಲಿದೆ.
ಹಸೀನ್ ಜಹಾನ್ ಪರ ವಕೀಲರು, "ಶಮಿ ಅವರಿಗೆ ಕೋಟ್ಯಂತರ ರೂಪಾಯಿ ಆದಾಯವಿದೆ. ಅವರ ಬಳಿ ದುಬಾರಿ ಕಾರುಗಳಿವೆ. ಅವರು ವಿದೇಶ ಪ್ರವಾಸ ಮಾಡುತ್ತಾರೆ. ಶಮಿಯವರದ್ದು ಐಷಾರಾಮಿ ಜೀವನ ಶೈಲಿ. ಮಗಳು ತಂದೆಯಂತೆಯೇ ಜೀವನಶೈಲಿ ಹೊಂದಲು ಹಕ್ಕುಳ್ಳವಳು. ಆಕೆ ಘನತೆಯಿಂದ ಬದುಕಬೇಕು," ಎಂದು ವಾದ ಮಂಡಿಸಿದರು.
ಅರ್ಜಿಯಲ್ಲಿ, ಶಮಿ ಹಲವಾರು ತಿಂಗಳುಗಳ ಕಾಲ ನ್ಯಾಯಾಲಯದ ಆದೇಶಗಳಿದ್ದರೂ ಜೀವನಾಂಶ ಪಾವತಿಗಳನ್ನು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
2018ರಲ್ಲಿ ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಹಾಗೂ ಆರ್ಥಿಕ ವಿವಾದಗಳ ಆರೋಪಗಳಿಂದ ಶಮಿ ದಂಪತಿಯ ಕಾನೂನು ಹೋರಾಟ ಆರಂಭಗೊಂಡಿತ್ತು. ಬಳಿಕ ಹೈಕೋರ್ಟ್ ಹಂತ ದಾಟಿ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿಯುತ್ತಿದೆ.
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಪ್ರತಿಕ್ರಿಯಿಸಲು ಶಮಿ ಹಿಂದೆ ನಿರಾಕರಿಸಿದ್ದರು. "ನಾನು ಹಿಂದಿನದನ್ನು ಮರೆತು ಕ್ರಿಕೆಟ್‌ನತ್ತ ಕೇಂದ್ರೀಕರಿಸಲು ಬಯಸುತ್ತೇನೆ. ಯಾರನ್ನೂ ದೂಷಿಸಲು ಬಯಸುವುದಿಲ್ಲ," ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.




