HEALTH TIPS

'ವಂದೇ ಮಾತರಂ' ಗೀತೆಯ ಕೆಲ ಸಾಲುಗಳನ್ನು 1937ರಲ್ಲಿ ಕೈಬಿಡಲಾಗಿದೆ: ಪ್ರಧಾನಿ ಮೋದಿ

ನವದೆಹಲಿ: 'ವಂದೇ ಮಾತರಂ' ಗೀತೆಯ ಕೆಲ ಪ್ರಮುಖ ಸಾಲುಗಳನ್ನು 1937ರಲ್ಲಿ ಕೈಬಿಟ್ಟದ್ದು, ದೇಶ ವಿಭಜನೆಯ ಬೀಜ ಬಿತ್ತಲು ಕಾರಣವಾಯಿತು. ಅಂತಹ 'ವಿಭಜಕ ಮನಃಸ್ಥಿತಿ' ಇನ್ನೂ ದೇಶಕ್ಕೆ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

'ವಂದೇ ಮಾತರಂ' ಗೀತೆಯು 150 ವರ್ಷ ಪೂರೈಸಿರುವ ಅಂಗವಾಗಿ ವರ್ಷಪೂರ್ತಿ ನಡೆಯಲಿರುವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಅಂಚೆ ಚೀಟಿ ಮತ್ತು ನಾಣ್ಯ ಬಿಡುಗಡೆ ಮಾಡಿದರು.

'ವಂದೇ ಮಾತರಂ ಗೀತೆಯು ಭಾರತದ ಸ್ವಾತಂತ್ರ್ಯ ಹೋರಾಟದ ಧ್ವನಿಯಾಗಿ ಬದಲಾಗಿತ್ತಲ್ಲದೆ, ಅದು ಪ್ರತಿಯೊಬ್ಬ ಭಾರತೀಯನ ಭಾವನೆಗಳನ್ನು ಹೊರಹೊಮ್ಮುವಂತೆ ಮಾಡಿತು. ದುರದೃಷ್ಟವಶಾತ್, 1937ರಲ್ಲಿ ಗೀತೆಯ ಪ್ರಮುಖ ಸಾಲುಗಳನ್ನು ಕೈಬಿಡಲಾಯಿತು. ಅದರ ಆತ್ಮದ ಒಂದು ಭಾಗ ಬೇರ್ಪಟ್ಟಿತು. ಇದು ದೇಶದಲ್ಲಿ ವಿಭಜನೆಯ ಬೀಜಗಳನ್ನು ಬಿತ್ತಿತು. ರಾಷ್ಟ್ರ ನಿರ್ಮಾಣದ 'ಮಹಾ ಮಂತ್ರ' ಎನಿಸಿರುವ ಗೀತೆಗೆ ಏಕೆ ಈ ಅನ್ಯಾಯವನ್ನು ಮಾಡಲಾಯಿತು ಎಂಬುದನ್ನು ಇಂದಿನ ಪೀಳಿಗೆ ತಿಳಿದುಕೊಳ್ಳಬೇಕು. ಈ ವಿಭಜಕ ಮನಃಸ್ಥಿತಿ ಇನ್ನೂ ದೇಶಕ್ಕೆ ಸವಾಲಾಗಿದೆ' ಎಂದು ಹೇಳಿದರು.

'ಆಪರೇಷನ್ ಸಿಂಧೂರ'ವನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಪ್ರಧಾನಿ ಅವರು, 'ವಂದೇ ಮಾತರಂ' ಎಲ್ಲಾ ಯುಗಗಳಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು. 'ಶತ್ರುಗಳು ಭಯೋತ್ಪಾದನೆ ಮೂಲಕ ನಮ್ಮ ಭದ್ರತೆ ಹಾಗೂ ಗೌರವದ ಮೇಲೆ ದಾಳಿ ಎಸಗಲು ಧೈರ್ಯ ಮಾಡಿದಾಗ, ಅದನ್ನು ಎದುರಿಸಲು ದುರ್ಗೆಯ ರೂಪವನ್ನು ಹೇಗೆ ತಾಳಬೇಕೆಂಬುದನ್ನು ಭಾರತವು ಜಗತ್ತಿಗೆ ತೋರಿಸಿಕೊಟ್ಟಿತು' ಎಂದರು.

ಬಿಜೆಪಿ ಆರೋಪ: ಜವಾಹರಲಾಲ್‌ ನೆಹರೂ ಅವರು ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್‌ ಪಕ್ಷವು ತನ್ನ ಕೋಮು ಕಾರ್ಯಸೂಚಿಯ ಭಾಗವಾಗಿ 'ವಂದೇ ಮಾತರಂ' ಗೀತೆಯ ಕೆಲವು ಸಾಲುಗಳನ್ನು ಕೈಬಿಟ್ಟು, ಮೊಟಕುಗೊಳಿಸಿದ ಗೀತೆಯನ್ನು ಮಾತ್ರ ಅಳವಡಿಸಿಕೊಂಡಿತು ಎಂದು ಬಿಜೆಪಿ ಆರೋಪಿಸಿದೆ.

'ಈ ಗೀತೆಯನ್ನು ಧರ್ಮದೊಂದಿಗೆ ಜೋಡಿಸುವ ಐತಿಹಾಸಿಕ ಪಾಪ ಮತ್ತು ಪ್ರಮಾದವನ್ನು ಕಾಂಗ್ರೆಸ್‌ ಮಾಡಿದೆ. ನೆಹರೂ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಧಾರ್ಮಿಕ ಕಾರಣಗಳನ್ನು ಉಲ್ಲೇಖಿಸಿ ಉದ್ದೇಶಪೂರ್ವಕವಾಗಿ ದುರ್ಗಾದೇವಿಯನ್ನು ಹೊಗಳಿದ ವಂದೇ ಮಾತರಂನ ಸಾಲುಗಳನ್ನು ತೆಗೆದುಹಾಕಿದೆ' ಎಂದು ಬಿಜೆಪಿ ವಕ್ತಾರ ಸಿ.ಆರ್ ಕೇಶವನ್ 'ಎಕ್ಸ್‌'ನಲ್ಲಿ ಪೋಸ್ಟ್‌ನಲ್ಲಿ ಮಾಡಿದ್ದಾರೆ.

ನರೇಂದ್ರ ಮೋದಿ ಪ್ರಧಾನಿ'ವಂದೇ ಮಾತರಂ' ಗೀತೆಯು ಭಾರತ ಮಾತೆಯ ಆರಾಧನೆ. ಅದು ನಮ್ಮನ್ನು ಇತಿಹಾಸದೊಂದಿಗೆ ಬೆಸೆಯುವಂತೆ ಮಾಡುವುದಲ್ಲದೆ ಧೈರ್ಯವನ್ನೂ ತುಂಬುತ್ತದೆ

ಪ್ರಧಾನಿ ಕ್ಷಮೆಗೆ ಕಾಂಗ್ರೆಸ್‌ ಆಗ್ರಹ

'ವಂದೇ ಮಾತರಂ' ಗೀತೆಯ ವಿಷಯದಲ್ಲಿ ಪ್ರಧಾನಿ ಅವರು ಕಾಂಗ್ರೆಸ್‌ ವಿರುದ್ಧ ಸುಳ್ಳು ಆರೋಪ ಮಾಡಿದ್ದು ಅದಕ್ಕೆ ದೇಶದ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್‌ ಶುಕ್ರವಾರ ಆಗ್ರಹಿಸಿದೆ. 'ವಂದೇ ಮಾತರಂ ಜತೆ ವಿಶೇಷ ಸಂಬಂಧ ಹೊಂದಿದ್ದ ರವೀಂದ್ರನಾಥ ಟ್ಯಾಗೋರ್‌ ಅವರು ಗೀತೆಯ ಮೊದಲ ಎರಡು ಚರಣಗಳನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಿದ್ದರು. 1937ರಲ್ಲಿ ಅವರ ಸಲಹೆಯಂತೆ ಎರಡು ಚರಣಗಳನ್ನು ಅಳವಡಿಸಿ ಉಳಿದ ಸಾಲುಗಳನ್ನು ಕೈಬಿಡಲಾಯಿತು' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ. ನೊಬೆಲ್‌ ಪ್ರಶಸ್ತಿ ಪುರಸ್ಕೃತ ಟ್ಯಾಗೋರ್‌ ಅವರು ವಿಭಜಕ ಸಿದ್ಧಾಂತ ಹೊಂದಿದ್ದಾರೆ ಎಂದು ಪ್ರಧಾನಿ ಅವರು ಆರೋಪಿಸಿರುವುದು 'ನಾಚಿಕೆಗೇಡಿನ' ಸಂಗತಿ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries