ಗುವಾಹಟಿ: ಅಸ್ಸಾಂ ಸರಕಾರವು ರವಿವಾರ ಪಶ್ಚಿಮ ಅಸ್ಸಾಮಿನ ಗೋಲ್ಪಾರಾ ಜಿಲ್ಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ದಹಿಕಾಟಾ ಮೀಸಲು ಅರಣ್ಯದೊಳಗೆ ಅತಿಕ್ರಮಣಗೊಂಡಿದೆ ಎನ್ನಲಾಗಿರುವ ಸುಮಾರು 153 ಹೆಕ್ಟೇರ್ ಭೂಮಿಯನ್ನು ಮುಕ್ತಗೊಳಿಸಲು ನೆಲಸಮ ಕಾರ್ಯಕ್ಕೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ.
15 ದಿನಗಳ ಹಿಂದೆಯೇ 580 ಕುಟುಂಬಗಳಿಗೆ ತೆರವು ನೋಟಿಸ್ ಗಳನ್ನು ನೀಡಲಾಗಿದೆ. ಈ ಭೂಮಿಯು ಸಂಪೂರ್ಣವಾಗಿ ದಹಿಕಾಟಾ ಮೀಸಲು ಅರಣ್ಯದೊಳಗಿದೆ ಮತ್ತು ಈ ಜನರು ಅದನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ಗೋಲ್ಪಾರಾ ಜಿಲ್ಲಾಧಿಕಾರಿ ಪ್ರದೀಪ್ ತೈಮಂಗ್ ಸುದ್ದಿಸಂಸ್ಥೆಗೆ ತಿಳಿಸಿದರು.
ನೋಟಿಸ್ ಗಳನ್ನು ಸ್ವೀಕರಿಸಿದ ಬಳಿಕ ಸುಮಾರು ಶೇ.70ರಷ್ಟು ನಿವಾಸಿಗಳು ಸ್ವಯಂಪ್ರೇರಣೆಯಿಂದ ಜಾಗವನ್ನು ಖಾಲಿ ಮಾಡಿದ್ದಾರೆ ಮತ್ತು ಇತರರು ಆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದ ಅವರು, ಆಡಳಿತವು ಕಾರ್ಯಾಚರಣೆಗಾಗಿ ಎರಡು ದಿನಗಳನ್ನು ನಿಗದಿಗೊಳಿಸಿದೆ, ಆದರೆ ಅದು ಒಂದೇ ದಿನದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಈವರೆಗೆ ನಿವಾಸಿಗಳಿಂದ ಯಾವುದೇ ಪ್ರತಿರೋಧ ಎದುರಾಗಿಲ್ಲ ಎಂದರು.
ಗುವಾಹಟಿ ಉಚ್ಚ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದರು.
ತೆರವುಗೊಳಿಸಲಾಗುತ್ತಿರುವ ಭೂಮಿಯು ಆನೆ ಕಾರಿಡಾರ್‌ನ ವ್ಯಾಪ್ತಿಯಲ್ಲಿದ್ದು,ಅತಿಕ್ರಮಣಗಳನ್ನು ತೆಗೆದುಹಾಕುವುದು ಮಾನವ-ಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂದು ವಿಶೇಷ ಮುಖ್ಯ ಕಾರ್ಯದರ್ಶಿ (ಅರಣ್ಯ) ಎಂ.ಕೆ.ಯಾದವ್ ತಿಳಿಸಿದರು.




