ಇದರೊಂದಿಗೆ 2021ರಲ್ಲಿ ವಾರ್ಷಿಕ ಸ್ವಚ್ಛತಾ ಅಭಿಯಾನ ಆರಂಭಗೊಂಡಾಗಿನಿಂದ ಗುಜರಿ ಮಾರಾಟದಿಂದ ಸರಕಾರದ ಒಟ್ಟು ಆದಾಯವು ಸುಮಾರು 4,100 ಕೋಟಿ ರೂಪಾಯಿ ಗಳಿಗೇರಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಈ ವರ್ಷದ ಅ.2ರಿಂದ 31ರವರೆಗೆ ನಡೆದ ಅಭಿಯಾನದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ, 232 ಲಕ್ಷ ಚದರಡಿ ಕಚೇರಿ ಸ್ಥಳವನ್ನು ಗುಜರಿ ವಸ್ತುಗಳಿಂದ ಮುಕ್ತಗೊಳಿಸಲಾಗಿದ್ದು, 29 ಲಕ್ಷದಷ್ಟು ಅತ್ಯಂತ ಹೆಚ್ಚಿನ ಸಂಖ್ಯೆಯ ಭೌತಿಕ ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಸುಮಾರು 11.58 ಲಕ್ಷ ಕಚೇರಿ ಸ್ಥಳಗಳನ್ನು ಒಳಗೊಂಡಿದ್ದ ಈ ಅಭಿಯಾನವು ಈವರೆಗಿನ ಅತ್ಯಂತ ಬೃಹತ್ ಕಾರ್ಯಾಚರಣೆಯಾಗಿದೆ.
ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಸಚಿವಾಲಯದ ಆಶ್ರಯದಲ್ಲಿ ಸಾಗರೋತ್ತರ ರಾಜತಾಂತ್ರಿಕ ಕಚೇರಿಗಳು ಸೇರಿದಂತೆ 84 ಸಚಿವಾಲಯಗಳು ಮತ್ತು ಅಂತರ್-ಸಚಿವಾಲಯ ಸಮನ್ವಯವನ್ನು ಪರಿಣಾಮಕಾರಿಯಾಗಿ ಸಾಧಿಸಲಾಗಿತ್ತು. ಹಿರಿಯ ಸಚಿವರಾದ ಮನ್ಸುಖ ಮಾಂಡವೀಯ,ಕೆ.ರಾಮ ಮೋಹನ ನಾಯ್ಡು ಮತ್ತು ಡಾ.ಜಿತೇಂದ್ರ ಸಿಂಗ್ ಅವರು ಇಡೀ ಅಭಿಯಾನದ ಮೇಲ್ವಿಚಾರಣೆಯನ್ನು ನೋಡಿಕೊಂಡಿದ್ದರು.
2021 ಮತ್ತು 2025ರ ನಡುವೆ ಕೇಂದ್ರವು ನಡೆಸಿದ್ದ ಐದು ಯಶಸ್ವಿ ವಿಶೇಷ ಅಭಿಯಾನಗಳು ಸರಕಾರಿ ಕಚೇರಿಗಳಲ್ಲಿ ಸ್ವಚ್ಛತೆಯನ್ನು ವಾಡಿಕೆಯ ಕ್ರಮವನ್ನಾಗಿ ಮಾಡುವಲ್ಲಿ ಮತ್ತು ಬಾಕಿ ಉಳಿದಿದ್ದ ಕೆಲಸದ ಹೊರೆಯನ್ನು ಕಡಿಮೆ ಮಾಡಲು ನೆರವಾಗಿವೆ.
ಈ ವರ್ಷ ವಿವಿಧ ಸಚಿವಾಲಯಗಳ ಸಂಪುಟ ಸಚಿವರು ಮತ್ತು ಸಹಾಯಕ ಸಚಿವರು ಅಭಿಯಾನವನ್ನು ಪರಿಶೀಲಿಸಿದ್ದು, ಸಿಬ್ಬಂದಿಗಳ ಜೊತೆ ನಿಯಮಿತ ಸಂವಾದಗಳನ್ನು ನಡೆಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ.




