ಲಾತೆಹಾರ್: ಜಾರ್ಖಂಡ್‌ನ ಲಾತೇಹಾರ್ ಜಿಲ್ಲೆಯಲ್ಲಿ ಬುಧವಾರ ಇಬ್ಬರು ನಕ್ಸರು ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಶರಣಾಗಿರುವ ಇಬ್ಬರಲ್ಲಿ ಒಬ್ಬರನ್ನು ಜಾರ್ಖಂಡ್ ಜನ ಮುಕ್ತಿ ಪರಿಷತ್‌ನ (ಜೆಜೆಎಂಪಿ) ಉಪ ವಲಯ ಕಮಾಂಡರ್ ಬ್ರಜೇಶ್ ಯಾದವ್ ಅಲಿಯಾಸ್ ರಾಕೇಶ್ ಜಿ ಎಂದು ಗುರುತಿಸಲಾಗಿದೆ.
ಗುಮ್ಲಾ ಜಿಲ್ಲೆಯವರಾಗಿರುವ ಇವರ ಬಗ್ಗೆ ಮಾಹಿತಿ ನೀಡಿದವರಿಗೆ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಮತ್ತೊಬ್ಬರು ಜೆಜೆಎಂಪಿಯ ಪ್ರಾದೇಶಿಕ ಕಮಾಂಡರ್ ಆಗಿದ್ದು, ಲಾತೆಹಾರ್ ಜಿಲ್ಲೆಯ ಅವಧೇಶ್ ಲೋಹ್ರಾ ಅಲಿಯಾಸ್ ರೋಹಿತ್ ಲೋಹ್ರಾ ಎಂದು ಗುರುತಿಸಲಾಗಿದೆ.
'ಜೆಜೆಎಂಪಿಗೆ ಸೇರಿದ ಇಬ್ಬರು ಸಕ್ರಿಯ ನಕ್ಸಲರು ಇಂದು ಶರಣಾದರು. ಬ್ರಜೇಶ್ ಯಾದವ್ ವಿರುದ್ಧ 10 ಪ್ರಕರಣಗಳು ಬಾಕಿ ಇವೆ. ಅವಧೇಶ್ ವಿರುದ್ಧ ಐದು ಪ್ರಕರಣಗಳು ಬಾಕಿ ಇವೆ. ರಾಜ್ಯ ಸರ್ಕಾರದ 'ನಯಿ ದಿಶಾ' ನೀತಿಯ ಅಡಿಯಲ್ಲಿ ಇಬ್ಬರೂ ನಮ್ಮ ಮುಂದೆ ಶರಣಾಗಿದ್ದಾರೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಗೌರವ್ ಹೇಳಿದ್ದಾರೆ.




