ನವದೆಹಲಿ: ಸ್ವಯಂ ಚಾಲಿತ ರೈಲು ಸುರಕ್ಷತಾ ವ್ಯವಸ್ಥೆಯ ಸುಧಾರಿತ ಆವೃತ್ತಿಯಾದ 'ಕವಚ್ 4.0' ಅನ್ನು ಸೆಪ್ಟೆಂಬರ್ ವೇಳೆಗೆ 654 ಕಿ.ಮೀ. ಉದ್ದದ ರೈಲು ಹಳಿಗಳಿಗೆ ಅಳವಡಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಚಂದ್ರಶೇಖರ್ ಗೌರ್ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಸಚಿವಾಲಯ, 'ಈ ವ್ಯವಸ್ಥೆಯನ್ನು 155 ರೈಲು ನಿಲ್ದಾಣ ಹಾಗೂ 2,892 ರೈಲು ಎಂಜಿನ್‌ಗಳಲ್ಲಿ ಅಳವಡಿಸಲಾಗಿದೆ.
ದೇಶದಾದ್ಯಂತ 18 ವಲಯಗಳಲ್ಲಿ ಈ ಕಾರ್ಯ ವ್ಯಾಪಕವಾಗಿ ನಡೆಯುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ವಿಭಾಗಗಳಲ್ಲಿ ಕಾರ್ಯಾರಂಭ ಮಾಡಲಿದೆ' ಎಂದು ತಿಳಿಸಿದೆ.
ಲೋಕೊ ಪೈಲಟ್‌ಗಳು ನಿಗದಿತ ವೇಗದ ಮಿತಿಯಲ್ಲಿ ರೈಲನ್ನು ಚಲಾಯಿಸಲು ವಿಫಲರಾದಾಗ ಸ್ವಯಂಚಾಲಿತವಾಗಿ ಬ್ರೇಕ್ ಹಾಕುವ ಮೂಲಕ ಕವಚ್ ಅವರ ಸಹಾಯಕ್ಕೆ ಬರುತ್ತದೆ.
ಇದು ಸ್ಥಳೀಯವಾಗಿ ವಿನ್ಯಾಸ, ಅಭಿವೃದ್ಧಿ ಹಾಗೂ ತಯಾರಿಸಿದ ವ್ಯವಸ್ಥೆಯಾಗಿದೆ. 2016ರ ಫೆಬ್ರುವರಿಯಲ್ಲಿ ಪ್ರಯಾಣಿಕ ರೈಲುಗಳಲ್ಲಿ ಮೊದಲ ಬಾರಿಗೆ ಬಳಸಲಾಗಿತ್ತು. 2020ರ ಜುಲೈನಲ್ಲಿ ರಾಷ್ಟ್ರೀಯ ಸ್ವಯಂಚಾಲಿತ ರೈಲು ರಕ್ಷಣೆ (ಎಟಿಪಿ) ವ್ಯವಸ್ಥೆಯಾಗಿ ಅಳವಡಿಸಿಕೊಳ್ಳಲಾಗಿತ್ತು.




