ನವದೆಹಲಿ: 'ಮತಕಳ್ಳರೇ, ಅಧಿಕಾರದ ಗದ್ದುಗೆ ಬಿಡಿ' ಎಂಬ ಘೋಷಣೆಯೊಂದಿಗೆ ಬಿಜೆಪಿ ವಿರುದ್ಧ ಆರಂಭವಾದ ಅಭಿಯಾನವು ಇದೇ ನವೆಂಬರ್ 8ಕ್ಕೆ ಮೊದಲ ವರ್ಷ ತುಂಬಲಿದ್ದು, ದೇಶದಾದ್ಯಂತ ರಾಜ್ಯದ ಕೇಂದ್ರ ಕಚೇರಿಗಳಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಗುರುವಾರ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, 'ಚುನಾವಣಾ ಆಯೋಗದ ಜೊತೆ ಸೇರಿಕೊಂಡು ಬಿಜೆಪಿಯು ನಡೆಸಿದ ಮತಕಳವಿನ ವಿರುದ್ಧ ವ್ಯಕ್ತವಾದ ಜನಾಕ್ರೋಶ ಹಾಗೂ ಅಸಮಾಧಾನದ ಕುರಿತಂತೆ ದೇಶದಾದ್ಯಂತ 5 ಕೋಟಿ ಜನರಿಂದ ಸಹಿ ಸಂಗ್ರಹಿಸಿದ್ದು, ರಾಷ್ಟ್ರಪತಿಯವರಿಗೆ ಹಸ್ತಾಂತರಿಸಲಾಗುವುದು' ಎಂದು ತಿಳಿಸಿದ್ದಾರೆ.
'ಹೋರಾಟದ ರೂಪುರೇಷೆ ಕುರಿತಂತೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಬುಧವಾರ ಸಭೆ ಸೇರಿ ಚರ್ಚೆ ನಡೆಸಿದ್ದರು. ಇದೇ ನವೆಂಬರ್ 8ರಂದು ಅಭಿಯಾನ ಒಂದು ವರ್ಷ ಪೂರೈಸಲಿದೆ. ಆ ಪ್ರಯುಕ್ತ ಪಕ್ಷದ ಎಲ್ಲ ರಾಜ್ಯ ಘಟಕಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಸಮಾರಂಭದಲ್ಲಿ ಪಕ್ಷದ ಹಿರಿಯ ನಾಯಕರು, ಪದಾಧಿಕಾರಿಗಳು ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕಾಪಾಡುವ ಕಾಂಗ್ರೆಸ್ ಪಕ್ಷದ ಸಾಮೂಹಿಕ ಏಕತೆ ಹಾಗೂ ಧೃಡಸಂಕಲ್ಪವನ್ನು ಪ್ರದರ್ಶಿಸಲಿದ್ದಾರೆ' ಎಂದು ತಿಳಿಸಿದ್ದಾರೆ.
'ಮತ ಕಳವಿನ ಕುರಿತು ಪ್ರಬಲ ಸಾಕ್ಷಿಯಾಗಿ ದೇಶದಾದ್ಯಂತ 5 ಕೋಟಿ ಸಹಿ ಸಂಗ್ರಹಿಸಲಾಗಿದೆ. ನಕಲಿ ಮತದಾರರ ಸೇರ್ಪಡೆಗೊಳಿಸಿ, ನಕಲಿ ಮತದಾನದ ಮೂಲಕ ಪ‍್ರಜಾಪ್ರಭುತ್ವದ ಹತ್ಯೆ ಮಾಡುತ್ತಿರುವ ಕುರಿತು ಜನರ ಆಳವಾದ ಕಳಕಳಿಯೂ ಕಾಂಗ್ರೆಸ್ ಪಕ್ಷವು ನಡೆಸಿದ ಅಭಿಯಾನದ ಮೂಲಕ ವ್ಯಕ್ತವಾಗಿದೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
'ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ಸಂಗ್ರಹಿಸಿದ ಎಲ್ಲ ಸಹಿಗಳನ್ನು ಎಐಸಿಸಿ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗುತ್ತದೆ. ಇದಾದ ಬಳಿಕ ಮುಂದಿನ ಹಂತದ ಅಭಿಯಾನದಲ್ಲಿ ದೇಶದಾದ್ಯಂತ ನಾಗರಿಕರ ಮತ್ತಷ್ಟು ಸಹಿಗಳನ್ನು ಸಂಗ್ರಹಿಸಲಾಗುವುದು' ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
'ಅಂತಿಮವಾಗಿ ಈ ಎಲ್ಲ ಸಹಿಗಳು ದೇಶದ ಕೋಟ್ಯಂತರ ಜನರ ಧ್ವನಿಯನ್ನು ಪ್ರತಿನಿಧಿಸುತ್ತವೆ. ಆ ಮೂಲಕ ಚುನಾವಣಾ ಅಕ್ರಮವನ್ನು ತಕ್ಷಣವೇ ತಡೆಯಬೇಕು ಎಂದು ರಾಷ್ಟ್ರಪತಿಗಳನ್ನು ಕೋರಲಿದ್ದೇವೆ' ಎಂದು ಹೇಳಿದ್ದಾರೆ.
ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಭಾರತದ ಪ್ರಜಾಪ್ರಭುತ್ವದ ಪಾವಿತ್ರತ್ಯೆಯನ್ನು ಹಾಳು ಮಾಡುತ್ತಿರುವ ಮತದಾರರ ಪಟ್ಟಿಯ ತಿರುಚುವಿಕೆ ಹಾಗೂ ಚುನಾವಣಾ ಅಕ್ರಮದ ಕುರಿತಂತೆ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ
ರೂಪದರ್ಶಿ ಫೋಟೊ ಪ್ರದರ್ಶನ-ಸ್ಪಷ್ಟನೆ
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ರಾಯ್ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ಬ್ರೆಜಿಲ್ ರೂಪದರ್ಶಿಯ ಚಿತ್ರವು 10 ಮತಗಟ್ಟೆಗಳಲ್ಲಿ 20 ಬಾರಿ ಕಾಣಿಸಿಕೊಂಡಿತ್ತು ಎಂದು ರಾಹುಲ್ ಗಾಂಧಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಈ ಕುರಿತು ಬ್ರೆಜಿಲ್‌ನ ರೂಪದರ್ಶಿ ಲಾರಿಸ್ಸಾ ಅವರು ವಿಡಿಯೊದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. 'ನನ್ನ ಹಳೆಯ ಫೋಟೊವನ್ನು ಬಳಸಲಾಗಿದೆ. ಅದು ನನಗೆ 18ರಿಂದ 20 ವರ್ಷ ಆಗಿದ್ದ ವೇಳೆ ತೆಗೆದ ಚಿತ್ರ. ಅದನ್ನು ಭಾರತದ ಚುನಾವಣೆಯಲ್ಲಿ ಏಕೆ ಬಳಸಲಾಗುತ್ತಿದೆ. ನನ್ನನ್ನು ಭಾರತೀಯಳು ಎಂಬಂತೆ ಬಿಂಬಿಸಲಾಗಿದೆ. ಇದೆಂಥ ಹುಚ್ಚಾಟ' ಎಂದು ಪೋರ್ಚುಗೀಸ್ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಎಸ್‌ಐಆರ್ ವಿರುದ್ಧ ಬೀದಿಗಿಳಿದು ಹೋರಾಟ
ಚೆನ್ನೈ:'ನೈಜ ಮತದಾರರನ್ನು ತೆಗೆದುಹಾಕುವ ದೃಷ್ಟಿಯಿಂದಲೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಗೆ ಚುನಾವಣಾ ಆಯೋಗವು ಮುಂದಾಗಿದೆ' ಎಂದು ಡಿಎಂಕೆ ಆರೋಪಿಸಿದೆ. ಈ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ(ಎಸ್‌ಪಿಎ)ದಿಂದ ರಾಜ್ಯದ 38 ಜಿಲ್ಲಾ ಕೇಂದ್ರ ಕಚೇರಿಗಳಲ್ಲಿ ನವೆಂಬರ್ 11ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದೆ.
Cut-off box - ಅಭಿಯಾನದಲ್ಲಿ ವ್ಯಕ್ತವಾದ ಜನಾಭಿಪ್ರಾಯ *ಸಾರ್ವಜನಿಕರ ಪರಿಶೀಲನೆಗೆ ಭಾವಚಿತ್ರ ಸಹಿತ ಮತದಾರರ ಪಟ್ಟಿ ಪ್ರಕಟಿಸಬೇಕು *ಪ್ರತಿ ಚುನಾವಣೆಗೂ ಮುನ್ನ ಸೇರ್ಪಡೆ ತೆಗೆದುಹಾಕಿದ ಮತದಾರರ ಪಟ್ಟಿ ಪ್ರಕಟಿಸಬೇಕು *ತಪ್ಪಾಗಿ ತೆಗೆದುಹಾಕಿದವರ ಸೇರ್ಪಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು *ಮತದಾರರ ಪಟ್ಟಿ ಬದಲಾವಣೆಯ ಕೊನೆಯ ದಿನಾಂಕವನ್ನು ಸ್ಪಷ್ಟವಾಗಿ ಪ್ರಕಟಿಸಬೇಕು *ಕೊನೆಯ ಹಂತದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ.




