ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಎಡಪಂಥೀಯರ ಆದೇಶದ ಮೇರೆಗೆ ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ, ಸಿಂಗಪುರ ಸೇರಿದಂತೆ ಇತರ ದೇಶಗಳಲ್ಲಿರುವ ಸಾಮಾಜಿಕ ಮಾಧ್ಯಮಗಳಲ್ಲಿ 'ಭಾರತ ವಿರೋಧಿ' ಧೋರಣೆ ಹೇರಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರ 'ಎಕ್ಸ್ ಅಥವಾ ಟ್ವಿಟರ್' ಖಾತೆ ಕೂಡ ಅಮೆರಿಕದಲ್ಲಿದೆ ಎಂದು ಬಿಜೆಪಿ ದೂರಿದೆ. ಬಿಜೆಪಿ ಆರೋಪ ಕುರಿತು ಕಾಂಗ್ರೆಸ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
'2014ರಿಂದ ಕಾಂಗ್ರೆಸ್, ವಿಶೇಷವಾಗಿ ರಾಹುಲ್ ಗಾಂಧಿ ಅವರ ಸಾಮಾಜಿಕ ಮಾಧ್ಯಮ ವಿಭಾಗ, ಸಲಹಾ ತಂಡ ಮತ್ತು ಎಡಪಂಥೀಯರ ಪ್ರಸಿದ್ಧ ಮುಖಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತವನ್ನು ಅವಮಾನಿಸಲು ಯಾವುದೇ ಅವಕಾಶವನ್ನು ಬಿಟ್ಟುಕೊಡುತ್ತಿಲ್ಲ. ಇದಕ್ಕಾಗಿ ಅವರು ನಿರಂತರವಾಗಿ ವಿದೇಶಿ ಸಾಮಾಜಿಕ ಮಾಧ್ಯಮಗಳ ನೆರವನ್ನು ಪಡೆಯುತ್ತಿದ್ದಾರೆ' ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರ ವಾಗ್ದಾಳಿ ನಡೆಸಿದ್ದಾರೆ.
'ಬಿಜೆಪಿ, ಆರ್‌ಎಸ್‌ಎಸ್ ಮತ್ತು ಮೋದಿ ಸರ್ಕಾರದ ಬಗ್ಗೆ ವಿರೋಧಿ ಧೋರಣೆ ಹೇರಲು ಅಮೆರಿಕ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ, ಸಿಂಗಪುರ ಸೇರಿದಂತೆ ವಿವಿಧ ದೇಶಗಳಲ್ಲಿ ಕಾಂಗ್ರೆಸ್ 'ಎಕ್ಸ್' ಖಾತೆಗಳನ್ನು ತೆರೆದಿದೆ' ಎಂದೂ ಪಾತ್ರ ಗುಡುಗಿದ್ದಾರೆ.
'ಕೆಲವು ದಿನಗಳ ಹಿಂದೆ 'ಎಕ್ಸ್' ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ ಈ ವಿಚಾರ ಬಯಲಾಗಿದೆ. ಇದರೊಂದಿಗೆ ಸಾಮಾಜಿಕ ಮಾಧ್ಯಮಗಳ ಖಾತೆದಾರರ ಸ್ಥಳ, ಖಾತೆ ರಚನೆಯ ದಿನಾಂಕ ಸೇರಿದಂತೆ ಇತರೆ ಮಾಹಿತಿಯನ್ನು ಪಡೆಯಬಹುದು. ಇದರಿಂದಲೇ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ಎಕ್ಸ್ ಖಾತೆ ಅಮೆರಿಕದಲ್ಲಿರುವುದು ಪತ್ತೆಯಾಗಿದೆ' ಎಂದು ಅವರು ವಿವರಿಸಿದ್ದಾರೆ.
'ಮಹಾರಾಷ್ಟ್ರ ಕಾಂಗ್ರೆಸ್‌ನ ಎಕ್ಸ್ ಖಾತೆಯು ಐರ್ಲೆಂಡ್‌ನಲ್ಲಿದೆ. ಅವರು ಈಗ ಅದನ್ನು ಭಾರತಕ್ಕೆ ಬದಲಾಯಿಸಿದ್ದಾರೆ. ಆದರೆ, ಖಾತೆಯನ್ನು ರಚಿಸಿದಾಗ ಅದು ಐರ್ಲೆಂಡ್‌ನಲ್ಲಿತ್ತು. ಹಿಮಾಚಲ ಪ್ರದೇಶ ಕಾಂಗ್ರೆಸ್‌ನ ಖಾತೆಯನ್ನು ಥೈಲ್ಯಾಂಡ್ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ರಚಿಸಲಾಗಿದೆ. ಆದರೂ ಅದು ಭಾರತದಲ್ಲಿದೆ' ಎಂದು ಸಂಬಿತ್ ಪಾತ್ರ ಪ್ರತಿಪಾದಿಸಿದ್ದಾರೆ.




