ಆರಾ/ ಬೆಗೂಸರಾಯ್: ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರ ಬಿರುಸು ಪಡೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ತುರುಸಿನ ಪ್ರಚಾರ ನಡೆಸಿದ್ದಾರೆ. ಮೊದಲ ಹಂತದ ಮತದಾನದ ದಿನಾಂಕ ಸಮೀಪಿಸುತ್ತಿರುವಂತೆಯೇ ಬಿಜೆಪಿ-ಕಾಂಗ್ರೆಸ್ ಪರಸ್ಪರ ವಾಕ್ಸಮರ ತೀವ್ರಗೊಳಿಸಿವೆ.
'ಆರ್‌ಜೆಡಿ ಬೆದರಿಕೆಗೆ ಮಣಿದ ಕಾಂಗ್ರೆಸ್'
ಭೋಜಪುರ ಜಿಲ್ಲೆಯ ಆರಾದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದರು. 'ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಒಪ್ಪಿಕೊಳ್ಳಲು ಕಾಂಗ್ರೆಸ್ ಸಿದ್ಧವಿರಲಿಲ್ಲ. ಆದರೆ, ಬೆದರಿಕೆಗೆ ಮಣಿದು ಒಪ್ಪಿಕೊಳ್ಳಬೇಕಾಯಿತು' ಎಂದು ಆರೋಪಿಸಿದರು.
'ಆರ್‌ಜೆಡಿ ಪಕ್ಷದವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲು ಕಾಂಗ್ರೆಸ್ ಎಂದಿಗೂ ಬಯಸಿರಲಿಲ್ಲ. ಆದರೆ, ಆರ್‌ಜೆಡಿಯು ಕಾಂಗ್ರೆಸ್‌ನ ತಲೆಗೆ ಕಟ್ಟಾ (ನಾಡ ಪಿಸ್ತೂಲ್) ಗುರಿ ಇಟ್ಟು ಬೆದರಿಸುವ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಚುನಾವಣೆಯ ನಂತರ, ಎರಡೂ ಪಕ್ಷಗಳ ನಾಯಕರು ಪರಸ್ಪರ ತಲೆ ಒಡೆಯಲಿದ್ದಾರೆ. ಅದರಿಂದ ಬಿಹಾರಕ್ಕೆ ಯಾವುದೇ ಒಳಿತು ಉಂಟಾಗದು' ಎಂದು ವಾಗ್ದಾಳಿ ನಡೆಸಿದರು.
ಆಡಳಿತಾರೂಢ ಎನ್‌ಡಿಎ ಭಾರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, 'ವಿಕಸಿತ ಭಾರತ'ಕ್ಕೆ ಅಗತ್ಯವಾಗಿರುವ 'ಅಭಿವೃದ್ಧಿ ಹೊಂದಿದ ಬಿಹಾರ' ನಿರ್ಮಾಣದ ಕೆಲಸ ಮುಂದುವರಿಯಲಿದೆ ಎಂದರು.
'ಆರ್‌ಜೆಡಿಯ ಜಂಗಲ್ ರಾಜ್ ಆಡಳಿತವನ್ನು ಬಿಹಾರದ ಜನರು ಇನ್ನೂ ಮರೆತಿಲ್ಲ. 'ಜಂಗಲ್ ರಾಜ್ ವಾಲಾ'ಗಳು ಈ ಚುನಾವಣೆಯಲ್ಲಿ ಇತಿಹಾಸದಲ್ಲೇ ಹೀನಾಯ ಸೋಲು ಎದುರಿಸಲಿದ್ದಾರೆ' ಎಂದು ಹೇಳಿದರು.
'ಬಿಜೆಪಿ, ಆರ್‌ಎಸ್‌ಎಸ್‌ನಿಂದ ಮತ ಕಳವು'
'ಕರ್ನಾಟಕ, ಮಹಾರಾಷ್ಟ್ರ ಹರಿಯಾಣ ಮತ್ತು ಮಧ್ಯ ಪ್ರದೇಶದ ಚುನಾವಣೆಗಳನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ 'ಸಂಪೂರ್ಣವಾಗಿ ಕದ್ದಿವೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಬೆಗೂಸರಾಯ್‌ನಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು 'ಚುನಾವಣಾ ಆಯೋಗವು ಬಿಹಾರದಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ಬೆಂಬಲಿಗರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದೆ. ನಾವು ಇದಕ್ಕೆ ಈಗಾಗಲೇ ಪುರಾವೆಗಳನ್ನು ಒದಗಿಸಿದ್ದು, ಅದನ್ನು ಮತ್ತೆ ಒದಗಿಸುತ್ತೇವೆ' ಎಂದರು.
'ಪ್ರಧಾನಿ ಮೋದಿ ಅವರು ಮತ ಗಳಿಕೆಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ' ಎಂದು ಹೇಳಿದ ಕಾಂಗ್ರೆಸ್ ನಾಯಕ, 'ನೀವು ಅವರಿಗೆ (ಪ್ರಧಾನಿಗೆ) ಯೋಗ ಮಾಡಲು ಹೇಳಿದರೆ ಅವರು ಕೆಲವು ಆಸನಗಳನ್ನು ಮಾಡುತ್ತಾರೆ' ಎಂದು ವ್ಯಂಗ್ಯವಾಡಿದರು.
ಮತ ಗಳಿಸಲು ಅವರು ವೇದಿಕೆಯ ಮೇಲೆ ನೃತ್ಯ ಮಾಡುತ್ತಾರೆ. ಚುನಾವಣೆಯ ದಿನದವರೆಗೆ ನೀವು ಏನೇ ಹೇಳಿದರೂ ಮೋದಿ ಅದನ್ನು ಮಾಡುವರು. ಏಕೆಂದರೆ, ಚುನಾವಣೆಯ ನಂತರ ಅವರು ತಮ್ಮ ನೆಚ್ಚಿನ ಉದ್ಯಮಿಗಳ ಪರವಾಗಿ ಮಾತ್ರ ಕೆಲಸ ಮಾಡುತ್ತಾರೆ' ಎಂದು ಟೀಕಿಸಿದರು.
ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅದು ಯಾವುದೇ ನಿರ್ದಿಷ್ಟ ಜಾತಿಗೆ ಸೀಮಿತವಾಗಿರದೆ, ಸಮಾಜದ ಪ್ರತಿಯೊಂದು ವರ್ಗದ ಏಳಿಗೆಗಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.
ಯುವಜನರು ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳದಂತೆ ಅವರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಧಾನಿ ರೀಲ್‌ಗಳನ್ನು ವೀಕ್ಷಿಸುವಂತೆ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷಬಿಜೆಪಿ ಮತ್ತು ಜೆಡಿಯು ಕಳೆದ 20 ವರ್ಷಗಳಲ್ಲಿ ಬಿಹಾರದ ಯುವ ಜನರ ಪ್ರತಿಯೊಂದು ಅವಕಾಶವನ್ನೂ ಕಸಿದುಕೊಂಡಿದೆ. ಇದೀಗ ಬದಲಾವಣೆಯ ಕಾಲ ಕೂಡಿಬಂದಿದೆ ಅಮಿತ್ ಶಾ ಕೇಂದ್ರ ಗೃಹ ಸಚಿವಲಾಲು ಅವರ ಮಗ (ತೇಜಸ್ವಿ) ಬಿಹಾರದ ಮುಖ್ಯಮಂತ್ರಿಯಾದರೆ ಅಪಹರಣ ಸುಲಿಗೆ ಮತ್ತು ಕೊಲೆ ಪ್ರಕರಣಗಳ ಮೇಲ್ವಿಚಾರಣೆ ಮಾಡಲು ಇನ್ನೂ ಮೂರು ಹೊಸ ಖಾತೆಗಳನ್ನು ರಚಿಸಲಾಗುತ್ತದೆ'ಸಿಂಧೂರ ಆಘಾತ: ಚೇತರಿಸದ ಕಾಂಗ್ರೆಸ್'-ನರೇಂದ್ರ ಮೋದಿ, ಪ್ರಧಾನಿನಮ್ಮ ಸೈನಿಕರು ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಅಡಗುತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದಾಗ ಕಾಂಗ್ರೆಸ್‌ನ 'ರಾಜಮನೆತನದವರು' ನಿದ್ದೆ ಕಳೆದುಕೊಳ್ಳುತ್ತಿದ್ದರು. ಪಾಕಿಸ್ತಾನ ಮತ್ತು ಕಾಂಗ್ರೆಸ್, ಆಪರೇಷನ್ ಸಿಂಧೂರದ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಭಯೋತ್ಪಾದಕರನ್ನು ಅವರ ತವರು ನೆಲದಲ್ಲಿಯೇ ಮಟ್ಟಹಾಕುವುದಾಗಿ ನಾವು ಪ್ರತಿಜ್ಞೆ ಮಾಡಿದ್ದೆವು. ಸಿಂಧೂರ ಕಾರ್ಯಾಚರಣೆ ಮೂಲಕ ಆ ಭರವಸೆಯನ್ನು ಈಡೇರಿಸಿದ್ದೇವೆ. ಇದು ರಾಷ್ಟ್ರಕ್ಕೆ ಹೆಮ್ಮೆ ತಂದಿದೆ. ಅವರು (ರಾಹುಲ್) ನುಸುಳುಕೋರರಿಗೆ ರಕ್ಷಣೆ ನೀಡಲಿಕ್ಕಾಗಿ 'ಮತದಾರರ ಅಧಿಕಾರ ಯಾತ್ರೆ' ನಡೆಸಿದ್ದಾರೆ. ಬಿಹಾರದ ಜನರ ಸಂಪನ್ಮೂಲ ನುಸುಳುಕೋರರ ಕೈಸೇರಬಾರದು.'ಪ್ರಧಾನಿಗೆ ಟ್ರಂಪ್, ಉದ್ಯಮಿಗಳ ಭಯ'-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕವಿಶಾಲ ಎದೆ ಹೊಂದಿರುವುದು ನಿಮ್ಮನ್ನು ಧೈರ್ಯಶಾಲಿಯನ್ನಾಗಿ ಮಾಡುವುದಿಲ್ಲ. ಸಣಕಲು ಮೈಕಟ್ಟು ಹೊಂದಿದ್ದ ಮಹಾತ್ಮಾ ಗಾಂಧಿ ಅವರು ಆ ಕಾಲದ ದೈತ್ಯ ಶಕ್ತಿ ಎನಿಸಿದ್ದ ಬ್ರಿಟಿಷರನ್ನು ಯಾವ ರೀತಿ ಎದುರಿಸಿದ್ದರು ಎಂಬುದನ್ನು ನೋಡಿ. 'ನನಗೆ 56 ಇಂಚಿನ ಎದೆ ಇದೆ. ನಾನು ಯಾರಿಗೂ ಹೆದರುವುದಿಲ್ಲ' ಎಂದು ಹೇಳುವ ಮೋದಿ ಅವರು ಆಪರೇಷನ್ ಸಿಂಧೂರ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ಮಾಡಿದಾಗ ಹೆದರಿದರು. ಪಾಕ್ ವಿರುದ್ಧದ ಸೇನಾ ಸಂಘರ್ಷ ಎರಡನೇ ದಿನಗಳಲ್ಲಿ ಕೊನೆಗೊಂಡಿತು. ಅವರು (ಮೋದಿ) ಟ್ರಂಪ್‌ಗೆ ಹೆದರುತ್ತಾರೆ. ಅಷ್ಟೇ ಅಲ್ಲದೆ, ಅಂಬಾನಿ ಮತ್ತು ಅದಾನಿ ಅವರು ರಿಮೋಟ್-ಕಂಟ್ರೋಲ್ ಮೂಲಕ ಪ್ರಧಾನಿಯನ್ನು ನಿಯಂತ್ರಿಸುತ್ತಿದ್ದಾರೆ.




