HEALTH TIPS

ಕ್ರಿಮಿನಲ್‌ ಪ್ರಕರಣ ದಾಖಲಿಸಿ ಬೆದರಿಸಲು ಯತ್ನಿಸಿದ್ದರು: ಎನ್‌.ವಿ.ರಮಣ

ಅಮರಾವತಿ: 'ನನ್ನ ಮೇಲೆ ಒತ್ತಡ ತರುವ ಉದ್ದೇಶದಿಂದ ನನ್ನ ಕುಟುಂಬವನ್ನು ಗುರಿಯಾಗಿಸಿಕೊಂಡು ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು' ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಹೆಸರು ಪ್ರಸ್ತಾಪಿಸದೆಯೇ ಹೇಳಿದರು.

ವಿಐಟಿ-ಎಪಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, 'ನನ್ನ ಬೆದರಿಸುವ ಉದ್ದೇಶದಿಂದಲೇ ನನ್ನ ಕುಟುಂಬದ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರ ಬಗ್ಗೆ ನೀವೆಲ್ಲರೂ ಬಲ್ಲಿರಿ. ಆದರೆ, ನಾನು ಒಬ್ಬಂಟಿಯಾಗಿರಲಿಲ್ಲ. ಆ ಕಠಿಣ ರೈತರ ಬಗ್ಗೆ ಸಹಾನುಭೂತಿ ಹೊಂದಿದ್ದ ಎಲ್ಲರೂ ಈ ಬೆದರಿಕೆ ಹಾಗೂ ಬಲವಂತವನ್ನು ಎದುರಿಸಿದರು' ಎಂದು ಹೇಳಿದರು.

'ಸಾಂವಿಧಾನಿಕ ತತ್ವಗಳನ್ನು ಪಾಲಿಸಿದ ನ್ಯಾಯಾಂಗ ಸದಸ್ಯರ ಮೇಲೆ ಒತ್ತಡ ಹೇರಲು ಕಿರುಕುಳ ನೀಡಲಾಗಿತ್ತು. ಯಾವುದೇ ಪಾತ್ರವಿಲ್ಲದ ನ್ಯಾಯಾಧೀಶರ ಕುಟುಂಬಗಳು ರಾಜಕೀಯ ಪಕ್ಷಗಳ ಪಿತೂರಿಗೆ ಬಲಿಯಾದವು' ಎಂದು ಆರೋಪಿಸಿದರು.

'ಸ್ವಾತಂತ್ರ್ಯ ಹೋರಾಟದ ನಂತರ ದಕ್ಷಿಣ ಭಾರತದಲ್ಲಿ ನಡೆದ ಸುದೀರ್ಘ ಹೋರಾಟವಿದು. ಸರ್ಕಾರದಿಂದ ಒತ್ತಡ ಬಂದರೂ ಹಿಂದೆ ಸರಿಯದ ಅಮರಾವತಿ ರೈತರ ಧೈರ್ಯಕ್ಕೆ ಸೆಲ್ಯೂಟ್‌. ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟ ಅವರಿಗೆ ಕೃತಜ್ಞತೆಗಳು' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

'ಸರ್ಕಾರಗಳು ಬದಲಾಗಬಹುದು. ಆದರೆ, ನ್ಯಾಯಾಲಯಗಳು ಹಾಗೂ ಕಾನೂನಿನ ನಿಯಮಗಳು ಸ್ಥಿರತೆಯ ಆಧಾರಸ್ತಂಭಗಳಾಗಿ ಉಳಿಯುತ್ತವೆ. ಜನರು ಅದರಲ್ಲಿ ನಂಬಿಕೆ ಇರಿಸಿದಾಗ ಹಾಗೂ ಅನುಕೂಲಕ್ಕಾಗಿ ತಮ್ಮ ಸಮಗ್ರತೆಯನ್ನು ತ್ಯಜಿಸಲು ನಿರಾಕರಿಸಿದಾಗ ಮಾತ್ರ ಕಾನೂನಿನ ನಿಯಮಗಳು ಉಳಿಯುತ್ತವೆ' ಎಂದು ಹೇಳಿದರು.

ಆಂಧ್ರಪ್ರದೇಶದ ಏಕೈಕ ರಾಜಧಾನಿಯಾಗಿದ್ದ ಅಮರಾವತಿಯನ್ನು ರದ್ದುಗೊಳಿಸಿದ್ದಕ್ಕಾಗಿ ಮತ್ತು ವಿಶಾಖಪಟ್ಟಣವನ್ನು ಆಡಳಿತಾತ್ಮಕ ರಾಜಧಾನಿ, ಅಮರಾವತಿ ಶಾಸಕಾಂಗದ ರಾಜಧಾನಿ, ಕರ್ನೂಲ್‌ ಅನ್ನು ನ್ಯಾಯಾಂಗದ ರಾಜಧಾನಿಯಾಗಿ ಮಾಡುವ 'ಮೂರು ರಾಜಧಾನಿ'ಗಳ ಸೂತ್ರವನ್ನು ಪ್ರತಿಪಾದಿಸಿದ್ದಕ್ಕಾಗಿ ಅಂದಿನ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದನ್ನು ಎನ್‌.ವಿ. ರಮಣ ಉಲ್ಲೇಖಿಸಿದರು.

ಆನಂತರ, ಅಧಿಕಾರಕ್ಕೆ ಬಂದ ಎನ್‌. ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರವು ಅಮರಾವತಿ ರಾಜಧಾನಿ ಯೋಜನೆಗೆ ಮರುಜೀವ ನೀಡಿತು. ಈಗ ಕಾಮಗಾರಿಗಳು ಪ್ರಗತಿಯಲ್ಲಿ ಸಾಗಿವೆ.

ಎನ್‌.ವಿ.ರಮಣ, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಅನೇಕ ರಾಜಕೀಯ ನಾಯಕರು ಮೌನ ವಹಿಸಿದ್ದಾಗ ನ್ಯಾಯಮೂರ್ತಿಗಳು ವಕೀಲರು ಸಾಂವಿಧಾನಿಕ ತತ್ವಗಳನ್ನು ಎತ್ತಿ ಹಿಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries