ಉಪ್ಪಳ: ಉಪ್ಪಳ ಹಿದಾಯತ್‍ಬಜಾರ್ ನಿವಾಸಿ ಅಬೂಬಕ್ಕರ್ ಎಂಬವರ ಮನೆಗೆ ಅಪರಿಚಿತರು ಗುಂಡುಹಾರಾಟ ನಡೆಸಿದ್ದ ಪ್ರಕರಣ ಹೊಸ ತಿರುವಪಡೆದುಕೊಂಡಿದ್ದು, ಮನೆಮಾಲಿಕನ 14ರ ಹರೆಯದ ಪುತ್ರನೇ ಗುಂಡು ಹಾರಿಸಿರುವುದಾಗಿ ಪೊಲೀಸರು ನಡೆಸಿದ ತನಿಖೆಯಿಂದ ವ್ಯಕ್ತವಾಗಿದೆ. ಏರ್‍ಗನ್ ಮೂಲಕ ಬಾಲಕ ಗುಂಡು ಹಾರಿಸಿದ್ದು, ಪೊಲೀಸರು ಈ ಏರ್‍ಗನ್ ವಶಕ್ಕೆ ತೆಗೆದುಕೊಂಡಿದ್ದಾರೆ. ಶನಿವಾರ ಸಂಜೆ ಗುಂಡುಹಾರಾಟ ನಡೆಸಲಾಗಿತ್ತು.
ಅಬೂಬಕ್ಕರ್ ವಿದೇಶದಲ್ಲಿದ್ದು, ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ವಾಸಿಸುತ್ತಿದ್ದರು. ಸಾಮಗ್ರಿ ಖರೀದಿಗಾಗಿ ಅಬೂಬಕ್ಕರ್ ಅವರ ಪತ್ನಿ, ಬಾಲಕನನ್ನು ಮನೆಯಲ್ಲಿ ಬಿಟ್ಟು ಇಬ್ಬರು ಮಕ್ಕಳೊಂದಿಗೆ ಸಾಮಗ್ರಿ ಖರೀದಿಗಾಗಿ ತೆರಳಿದ್ದ ಸಂದರ್ಭ ಗುಂಡುಹಾರಾಟ ನಡೆದಿತ್ತು. ಇದರಿಂದ ಮನೆಯ ಕಿಟಿಕಿ ಬಾಗಿಲಿಗೆ ಹಾನಿಯುಂಟಾಗಿತ್ತು. ಸಾಮಗ್ರಿ ಖರೀದಿಸಿ ವಾಪಸಾದಾಗ, ಕಾರಲ್ಲಿ ಆಗಮಿಸಿದ್ದ ಅಪರಿಚಿತರು ಗುಂಡುಹಾರಿಸಿ ಪರಾರಿಯಾಗಿರುವುದಾಗಿ ಬಾಲಕ ತಿಳಿಸಿದ ಹಿನ್ನೆಲೆಯಲ್ಲಿ ಅಬೂಬಕ್ಕರ್ ಅವರು ಮಂಜೇಶ್ವರ ಠಾಣೆಗೆ ದೂರು ಸಲ್ಲಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು, ಫಾರೆನ್ಸಿಕ್ ತಜ್ಞರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದರು. ಸಿಸಿ ಕ್ಯಾಮರಾ ತಪಾಸಣೆ ನಡೆಸಿದಾಗ ಈ ಕಾಲಾವಧಿಯಲ್ಲಿ ಯಾವುದೇ ಕಾರು ಈ ಹಾದಿಯಾಗಿ ಹಾದುಹೋಗಿರಲಿಲ್ಲ. ಈ ಬಗ್ಗೆ ಬಾಲಕನನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಮನೆಯಲ್ಲಿದ್ದ ಏರ್‍ಗನ್ ತೆಗೆದು ಗುಂಡುಹಾರಿಸಿರುವುದಾಗಿ ತಿಳಿಸಿದ್ದಾನೆ. ಬಾಲಕನ ಕೃತ್ಯ ಅರಿವಿಗೆ ಬಾರದೆ, ಮನೆಯವರು ಪೊಲೀಸರಿಗೆ ದೂರು ನಿಡಿದ್ದರು. ಬಾಲಕ ನಡೆಸಿದ ಪುಂಡಾಟದಿಂದ ಮನೆಯವರು, ಸ್ಥಳೀಯರು ಹಾಗೂ ಪೊಲೀಸರನ್ನು ಎರಡು ದಿವಸಗಳ ವರೆಗೂ ಆತಂಕಕ್ಕೆ ತಳ್ಳಿದ್ದು, ಮಾಹಿತಿ ಹೊರಬೀಳುತ್ತಿದ್ದಂತೆ ನಿರಾಳರಾಗಿದ್ದಾರೆ. ಬಾಲಕನ ವಿರುದ್ಧ ಕೇಸು ದಾಖಲಿಸುವ ವಿಚಾರದಲ್ಲಿ ಪೊಲೀಸರು ಇನ್ನೂ ತೀರ್ಮಾನ ಕೈಗೊಂಡಿಲ್ಲ.




