ಕಾಸರಗೋಡು: ವಂದೇ ಭಾರತ್ ರೈಲಿನಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡುವುದನ್ನು ವಿವಾದಾತ್ಮಕವಾಗಿಸುವವರಿಂದ ಭಾರತ ಮಾತೆಯ ಪರಿಕಲ್ಪನೆ ಹಾಗೂ ಅಖಂಡತೆಯನ್ನು ನಿರೀಕ್ಷಿಸುವುದು ಸಾಧ್ಯವಾಗದು ಎಂದು ಮಹಿಳಾ ಮೋರ್ಚಾ ಕೇರಳ ರಾಜ್ಯಾಧ್ಯಕ್ಷೆ ನವ್ಯಾ ಹರಿದಾಸ್ ತಿಳಿಸಿದ್ದಾರೆ.
ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಭಾರತ ಮಾತೆಯ ಭಾವಚಿತ್ರದ ಮುಂದೆ ಪುಷ್ಪ ನಮನ ಸಲ್ಲಿಸುವುದು ಹಿಂದಿನಿಂದಲೂ ನಡೆದುಬರುತ್ತಿರುವ ಸಂಪ್ರದಾಯವಾಗಿದೆ. ಅಲ್ಪಸಂಖ್ಯಾತ ತುಷ್ಠೀಕರಣ ಧೋರಣೆ ಹೊಂದಿರುವವರು ಇಂತಹ ವಿಷಯವನ್ನು ಹಿಡಿದುಕೊಮಡು ವಿವಾದ ಸೃಷ್ಟಿಸುತ್ತಿದ್ದಾರೆ. ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ಕೇಂದ್ರದ ಎನ್‍ಡಿಎ ಸರ್ಕಾರ ಜಾರಿಗೆ ತಂದಿರುವ ಮಹಿಳಾ ಕಲ್ಯಾಣ ಯೋಜನೆಗಳನ್ನು ತನ್ನ ಸರ್ಕಾರದ್ದೆಂದು ಬಿಂಬಿಸುತ್ತಿದೆ. ಕಳೆದ ಒಂದು ವಾರದಿಂದ ಕೇರಳದಲ್ಲಿನಡೆಯುತ್ತಿರುವ ಕೆಲವೊಂದು ಘಟನೆಗಳು ಕೇರಳದ ಮಹಿಳಾ ಸಮುದಾಯವನ್ನು ಆಘಾತಕ್ಕೆ ತಳ್ಳಿದೆ. ರಾಜ್ಯ ಸರ್ಕಾರ ಸುರಕ್ಷಿತವಾಗಿದೆ ಎಂಬ ಹೇಳಿಕೆ ಸುಳ್ಳು ಎಂಬುದಕ್ಕೆ ಇದರಿಂದ ಸಾಬೀತಾಗಿದೆ ಎಂದು ತಿಳಿಸಿದರು.
ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಕೆ.ಎಸ್. ರಮಣಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಸತೀಶ್ಚಂದ್ರ ಭಂಡಾರಿ, ಸವಿತಾ ಟೀಚರ್, ಜಿಲ್ಲಾ ಉಪಾಧ್ಯಕ್ಷೆ ಎಚ್.ಆರ್.ಸುಕನ್ಯಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಜಿಲ್ಲಾಕಾರ್ಯದರ್ಶಿಗಳಾದ ಪುಷ್ಪಾ ಗೋಪಾಲನ್ ಮತ್ತು ಪ್ರಮೀಳಾ ಮಜಲ್, ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿಗಳಾದ ಪ್ರೇಮಲತಾ ಎಸ್. ಮತ್ತು ಅನಿತಾ ನಾಯ್ಕ್ ಉಪಸ್ಥಿತರಿದ್ದರು.





