ಕಾಸರಗೋಡು: ಪೊಲೀಸರು ಸೆರೆ ಹಿಡಿದ ವಾರಂಟ್ ಆರೋಪಿಯೊಬ್ಬ ಪೊಲೀಸ್ ಠಾಣೆಯಲ್ಲಿ ನಡೆಸಿದ ದಾಂಧಲೆಯಿಂದ ಎಸ್‍ಐ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದು, ಕಿಟಿಕಿ ಬಾಗಿಲಿಗೆ ಹಾನಿಯುಂಟಾಗಿದೆ.
ವಿದ್ಯಾನಗರ ಠಾಣೆಯಲ್ಲಿ ಘಟನೆ ನಡೆದಿದ್ದು, ದಾಂಧಲೆ ನಡೆಸಿದ ನೆಕ್ರಾಜೆ ಚೂರಿಪಳ್ಳ ನಿವಾಸಿ ಅಬ್ದುಲ್ ನಿಶಾದ್ ಪಿ.ಎ ಎಂಬಾತನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹೊರಿಡಿಸಿದ ವಾರಮಟ್ ಅನ್ವಯ ಅಬ್ದುಲ್ ನಿಶಾದ್‍ನನ್ನು ಪೊಲೀಸರು ವಶಕ್ಕೆ ತೆಗೆದು ಠಾಣೆಗೆ ಕರೆತಂದಿದ್ದರು. ಈ ಸಂದರ್ಭ ಠಾಣೆಯೊಳಗೆ ದಾಂಧಲೆ ನಡೆಸಿ ಠಾಣೆ ಎಸ್.ಐ ಶೈನ್ ಕೆ.ಪಿ, ಜ್ಯೂನಿಯರ್ ಎಸ್.ಐ ಸಫ್ವಾಣ್ ಕೆ.ಪಿ ಹಾಗೂ ಸಿವಿಲ್ ಪೊಲೀಸ್ ಅಧಿಕಾರಿ ಪ್ರಜಿತ್ ನಾಯರ್ ಮೇಲೆ ಹಲ್ಲೆ ಗೈದಿದ್ದಾನೆ. ನಂತರ ಠಾನೆ ಕಿಟಿಕಿ ಬಾಗಿಲಿಗೆ ಹಾನಿಯೆಸಗಿದ್ದು, ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾನೆ. ಈ ಸಂದರ್ಭ ಗಾಯಗೊಂಡ ಅಬ್ದುಲ್ ನಿಶಾದ್‍ಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಈತನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈತನಿಗೆ ನ್ಯಯಾಂಗ ಬಂಧನ ವಿಧಿಸಲಾಗಿದೆ.





