ಕಾಸರಗೋಡು: ಈ ವರ್ಷದ ಅಂತ್ಯದ ವೇಳೆಗೆ ವೇಳೆಗೆ ಕಾಸರಗೋಡನ್ನು ಸೌರ ಬೇಲಿಗಳನ್ನು ಹೊಂದಿರುವ ಸಂಪೂರ್ಣ ಸಂರಕ್ಷಿತ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂದು ಅರಣ್ಯ ಮತ್ತು ವನ್ಯಜೀವಿ ಸಚಿವ ಎ.ಕೆ. ಶಶೀಂದ್ರನ್ ತಿಳಿಸಿದ್ದಾರೆ. ಅವರು ಕಾಸರಗೋಡು ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವಿಕೆಗೆ ಸಂಬಂಧಿಸಿದ ನಿಯಂತ್ರಣ ಸಮಿತಿಯ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ಜಿಲ್ಲೆಯಲ್ಲಿ ಪ್ರಸ್ತುತ ಕೈಗೊಳ್ಳಲಾಗುತ್ತಿರುವ ಪರಿಣಾಮಕಾರಿ ಯೋಜನೆಗಳನ್ನು ಸಚಿವ ಎ.ಕೆ. ಶಶೀಂದ್ರನ್ ಶ್ಲಾಘಿಸಿದರು. ಖಾಸಗಿ ಜಮೀನಿಗೆ ಪ್ರವೇಶಿಸುತ್ತಿರುವ ಕಾಡುಹಂದಿಗಳನ್ನು ನಿರ್ಮೂಲನೆ ಮಾಡಲು ಜಿಲ್ಲೆಯಲ್ಲಿ ಅಗತ್ಯ ಕ್ರಮಗಳನ್ನು ತೀವ್ರವಾಗಿ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ನಿಟ್ಟಿನಲ್ಲಿ ತುರ್ತು ಸಭೆ ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಅರಣ್ಯಗಳ ಮೂಲಕ ಹಾದುಹೋಗುವ ರಸ್ತೆಗಳಲ್ಲಿ ವನ್ಯಜೀವಿಗಳು ವಾಹನ ಡಿಕ್ಕಿಯಾಗಿ ಸಾವಿಗೀಡಾಗುವುದನ್ನು ತಪ್ಪಿಸಲು ಮತ್ತು ಇತರ ಅಪಾಯಗಳನ್ನು ಕಡಿಮೆ ಮಾಡಲು ಜಿಲ್ಲಾಡಳಿತವು ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಾನವ ವಸಾಹತುಗಳಿಗೆ ಪ್ರವೇಶಿಸುವ ಹಾವುಗಳನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಮತ್ತು ತಾತ್ಕಾಲಿಕವಾಗಿ ಇರಿಸಲು ಅಗತ್ಯ ವ್ಯವಸ್ಥೆ ಸಜ್ಜುಗೊಳಿಸಬೇಕು. ಪನತ್ತಡಿ, ಬಳಾಲ್ ಮತ್ತು ಈಸ್ಟ್ ಎಳೇರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸೌರ ತೂಗು ಬೇಲಿಗಳ ನಿರ್ವಹಣೆಗಾಗಿ ವೆಸ್ಟ್‍ಎಳೇರಿ ಪಂಚಾಯಿತಿಯಿಮದ ಒಂದು ಲಕ್ಷ ಎಂಬತ್ತು ಸಾವಿರ ರೂ. ಮಂಜೂರುಮಡಲಾಗಿದೆ. ತ್ಯಾಜ್ಯ ರಾಶಿ ಬೀಳುವ ಪ್ರದೇಶಗಳಿಗೆ ವನ್ಯಜೀವಿಗಳು ಪ್ರವೇಶಿಸುವ ಸಾಧ್ಯತೆ ಇರುವುದರಿಂದ, ತ್ಯಾಜ್ಯ ವಿಲೇವಾರಿಗೆ ಮತ್ತು ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು. ವನ್ಯಜೀವಿ ದಾಳಿಯಲ್ಲಿ ಗಾಯಗೊಂಡವರಿಗೆ ಪರಿಹಾರಕ್ಕೆ ಸಂಬಂಧಿಸಿದಂತೆ ಮೇ 2025 ರವರೆಗಿನ ಅರ್ಜೀಗಳಿಗೆ ಸಂಬಂಧಿಸಿದ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಡಿಎಫ್‍ಒ ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮತ್ತು ವಿಭಾಗೀಯ ಅರಣ್ಯ ಅಧಿಕಾರಿ ಜೋಸ್ ಮ್ಯಾಥ್ಯೂ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಪ್ರಾಣಿ ಸಂರಕ್ಷಣೆಅಧಿಕಾರಿ ಡಾ.ಕೆ.ವಿ. ಬಿಂದು, ಸ್ಥಳೀಯಾಡಳಿತ, ಪೆÇಲೀಸ್, ಬುಡಕಟ್ಟು ಅಭಿವೃದ್ಧಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.





