ಕಾಸರಗೋಡು: ಕೇರಳದ ಕರಾವಳಿಯಲ್ಲಿ ಮುಂದಿನ 24ತಾಸುಗಳೊಳಗೆ ಸಮುದ್ರ ಮೂಲಕ ಉಗ್ರರ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ವರದಿ ಹಿನ್ನೆಲೆಯಲ್ಲಿ ಕರಾವಳಿ ಪೊಲೀಸ್, ಕೋಸ್ಟ್ ಗಾರ್ಡ್ ಹಾಗೂ ಪೊಲೀಸ್ ಇಲಾಖೆ ಕೈಗೊಂಡ ಭಾರೀ ಮುಂಜಾಗ್ರತಾ ಕ್ರಮದಿಂದ ನಗರದ ಜನತೆ ತಲ್ಲಣಗೊಂಡರು. ಕರಾವಳಿ ಪೊಲೀಸ್ ಹಾಗೂ ಕೋಸ್ಟಲ್ ಗಾರ್ಡ್ ಸಮುದ್ರದಲ್ಲಿ ಹಾಗೂ ಪೊಲೀಸರು ಕರಾವಳಿ ಪ್ರದೇಶದಲ್ಲಿ ಪೆಟ್ರೋಲಿಂಗ್ ಚುರುಕುಗೊಳಿಸುವುದರ ಜತೆಗೆ ಅರಬೀಸಮುದ್ರ ಕರಾವಳಿಯಾದ್ಯಂತ ಪೊಲೀಸರು ಪಿಕಪ್ ಪೋಸ್ಟ್ ಏರ್ಪಡಿಸುತ್ತಿದ್ದಂತೆ ಕರಾವಳಿಯ ಜನತೆ ಮತ್ತಷ್ಟು ಭೀತಿಗೊಳಗಾದರು. ಇಂಟೆಲಿಜೆನ್ಸ್ ವಿಭಾಗದ ಗುಪ್ತ ಮಾಹಿತಿಯನ್ವಯ ಜಾಗ್ರತಾನಿರ್ದೇಶನ ಜಾರಿಗೊಳಿಸಿ, ಬಂದೋಬಸ್ತ್ ಏರ್ಪಡಿಸಲಾಗಿತ್ತು! ಬೋಟುಗಳ ಮೂಲಕ ಕರಾವಳಿ ಪ್ರದೇಶಕ್ಕೆ ತಲುಪಿ ಭಾರೀ ಆಕ್ರಮಣ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಂಡ ಕಲ್ಪಿತ ಕಾರ್ಯಾಚರಣೆ ಎಂಬುದು ಮನವರಿಕೆಯಾಗುತ್ತಿದ್ದಂತೆ ಕರಾವಳಿ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ 6ಕೆಕ ಆರಂಭಗೊಂಡ ಕಲ್ಪಿತ ಕಾರ್ಯಾಚರಣೆ ಶನಿವಾರ ಬೆಳಗ್ಗಿನ 6ರ ವರೆಗೆ ಮುಂದುವರಿಯಲಿದೆ. ಏಕಾಏಕಿ ಉಗ್ರ ದಾಳಿ ನಡೆದಲ್ಲಿ ಕರಾವಳಿಯ ಜನತೆ ಯಾವರೀತಿ ಪ್ರತಿಕ್ರಿಯಿಸಬೇಕು ಹಾಗೂ ಇದಕ್ಕೆ ಯಾವ ರೀತಿಯಲ್ಲಿ ತಯಾರಾಬಗೇಕು ಎಂಬ ಬಗ್ಗೆ ಜಿಲ್ಲಾ ಪೊಲೀಸ್ ವತಿಯಿಂದ ಕಲ್ಪಿತ ಕಾರ್ಯಾಚರಣೆ ಆಯೋಜಿಸಲಾಗಿತ್ತು.




