ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳನ್ನು ಹಾಳುಗೆಡಹಲು ಮುಸ್ಲಿಂ ಲೀಗ್ ನಡೆಸುತ್ತಿರುವ ಕ್ರಮ ಮತ್ತು ಇದಕ್ಕೆ ಬೆಂಬಲ ನೀಡುತ್ತಿರುವ ನಗರಸಭೆ ಆಡಳಿತದ ನಿಲುವನ್ನು ವಿರೋಧಿಸಿ ಸಿಪಿಐ(ಎಂ) ನೇತೃತ್ವದ ಕಾಸರಗೋಡು ನಗರಸಭಾ ಸಮಿತಿ ವತಿಯಿಂದ ನಗರಸಭಾ ಕಚೇರಿ ಎದುರು ಪ್ರತಿಭಟನೆಯನ್ನು ಆಯೋಜಿಸಲಾಯಿತು.
ಕಾಸರಗೋಡು ಮುಖ್ಯ ಅಂಚೆ ಕಚೇರಿ ವಠಾರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ನಗರಸಭಾ ಮುಖ್ಯ ದ್ವಾರದ ಮುಂದೆ ಪೆÇಲೀಸರು ತಡೆಹಿಡಿದರು.
ನಗರಸಭೆಯ 22 ಮತ್ತು 24ನೇ ವಾರ್ಡ್‍ಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು 100ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವರು ಈ ಮೊದಲು ಸಲ್ಲಿಸಿದ್ದ ಅರ್ಜಿಯನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿ ತಿರಸ್ಕರಿಸಿದ್ದರು. ಮತ್ತೆ ಅವರ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಕಾಲಾವಕಾಶವನ್ನೂ ವಿಸ್ತರಿಸಿರುವುದು ಖಂಡನೀಯ. ನಗರ ಆಡಳಿತಾಧಿಕಾರಿಗಳು ಮತ್ತು ಮುಸ್ಲಿಂಲೀಗ್‍ನ ಮುಖಂಡರು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಅಕ್ರಮವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಹುನ್ನಾರ ನಡೆಸುತ್ತಿದ್ದಾರೆ. ನ್ಯಾಯಯುತ ಚುನಾವಣಾ ಪ್ರಕ್ರಿಯೆಯನ್ನು ಹಾಳುಗೆಡಹುವ ಪ್ರಯತ್ನದ ವಿರುದ್ಧ ಸಿಪಿಎಂ ಪ್ರತಿಭಟನೆ ಆಯೋಜಿಸಿರುವುದಾಗಿ ಧರಣಿ ಉದ್ಘಾಟಿಸಿದ ಜಿಲ್ಲಾ ಸಮಿತಿ ಸದಸ್ಯ ಟಿ ಕೆ ರಾಜನ್ ತಿಳಿಸಿದರು.
ನಗರಸಭಾ ಸದಸ್ಯೆ ಎಂ ಲಲಿತಾ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಸಮಿತಿ ಕಾರ್ಯದರ್ಶಿಗಳಾದ ಎಸ್. ಸುನೀಲ್ ಮತ್ತು ಅನಿಲ್ ಚೆನ್ನಿಕ್ಕರ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಸದಸ್ಯ ಕೆ.ಎ. ಮುಹಮ್ಮದ್ ಹನೀಫಾ ಸ್ವಾಗತಿಸಿದರು.




