ಇಂಫಾಲ್: ಮಣಿಪುರದ ಚುರಚಾಂದ್‌ಪುರ ಜಿಲ್ಲೆಯಲ್ಲಿ ಮಂಗಳವಾರ ಯುನೈಟೆಡ್ ಕುಕಿ ನ್ಯಾಶನಲ್ ಆರ್ಮಿ (ಯುಕೆಎನ್‌ಎ) ಮತ್ತು ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಿಷೇಧಿತ ಭೂಗತ ಕುಕಿ ಸಂಘಟನೆಯ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಒಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುರಚಾಂದ್‌ಪುರ ಪಟ್ಟಣದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಖಾನ್ಪಿ ಗ್ರಾಮದಲ್ಲಿ ಬೇಹುಗಾರಿಕಾ ಮಾಹಿತಿಯ ಆಧಾರದಲ್ಲಿ 21 ಪ್ಯಾರಾ ಸ್ಪೆಶಲ್ ಫೋರ್ಸಸ್ ಮತ್ತು 36 ಅಸ್ಸಾಮ್ ರೈಫಲ್ಸ್‌ನ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ, ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಗೆ ಯುಕೆಎನ್‌ಎ ಸದಸ್ಯರೊಂದಿಗೆ ಗುಂಡಿನ ಕಾಳಗ ನಡೆಯಿತು ಎಂದು ಅಸ್ಸಾಮ್ ರೈಫಲ್ಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
''ಕಾರ್ಯಾಚರಣೆಯ ವೇಳೆ, ತೀವ್ರವಾದಿ ಗುಂಪು ಭದ್ರತಾ ಪಡೆಗಳ ಮೇಲೆ ಅಪ್ರಚೋದಿತವಾಗಿ ಗುಂಡು ಹಾರಿಸಿತು. ಬಳಿಕ ನಡೆದ ಗುಂಡಿನ ಕಾಳಗದಲ್ಲಿ ತೀವ್ರವಾದಿ ಸಂಘಟನೆಯ ನಾಲ್ವರು ಹತರಾದರು.'' ಎಂದು ಹೇಳಿಕೆ ತಿಳಿಸಿದೆ.
''ಈ ಭಯೋತ್ಪಾದಕರನ್ನು ಯಶಸ್ವಿಯಾಗಿ ನಿರ್ಮೂಲಗೊಳಿಸಿರುವುದು ಅಮಾಯಕ ನಾಗರಿಕರನ್ನು ರಕ್ಷಿಸುವ, ಬೆದರಿಕೆಗಳನ್ನು ತಗ್ಗಿಸುವ ಹಾಗೂ ಮಣಿಪುರದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಮರುಸ್ಥಾಪಿಸುವ ಭಾರತೀಯ ಸೇನೆ ಮತ್ತು ಅಸ್ಸಾಮ್ ರೈಫಲ್ಸ್‌ನ ಬದ್ಧತೆಯನ್ನು ತೋರಿಸುತ್ತದೆ'' ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
2023 ಮೇ 3ರಂದು ಮಣಿಪುರದಲ್ಲಿ ಸ್ಫೋಟಗೊಂಡಿರುವ ಜನಾಂಗೀಯ ಹಿಂಸಾಚಾರ ಈಗಲೂ ಎಗ್ಗಿಲ್ಲದೆ ಮುಂದುವರಿದಿದೆ. ಮೆತೈ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಸಶಸ್ತ್ರ ಸಂಘರ್ಷದಲ್ಲಿ ಕನಿಷ್ಠ 260 ಮಂದಿ ಮೃತಪಟ್ಟಿದ್ದಾರೆ ಮತ್ತು 60,000ಕ್ಕೂ ಅಧಿಕ ಜನರು ನಿರ್ವಸಿತರಾಗಿದ್ದಾರೆ.




