ಕಾಸರಗೋಡು: ಆ್ಯಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಜಾಗೃತಿ ಸಪ್ತಾಹದ ಅಂಗವಾಗಿ ಬೀಚ್ ರನ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್ ಕಾಸರಗೋಡು, ಕುಟುಂಬ ಆರೋಗ್ಯ ಕೇಂದ್ರ ಪಳ್ಳಿಕೆರೆ ಜಂಟಿ ಆಶ್ರಯದಲ್ಲಿ ಬೇಕಲ್ ಬೀಚ್‍ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ. ವಿ. ರಾಮದಾಸ್ ಬೀಚ್ ಓಟಕ್ಕೆ ಚಾಲನೆ ನೀಡಿದರು. ಉಪ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಕೆ. ಸಂತೋಷ್, ಇ-ಹೆಲ್ತ್ ನೋಡಲ್ ಅಧಿಕಾರಿ ಡಾ.ಬಾಸಿಲ್ ವರ್ಗೀಸ್, ಜಿಲ್ಲಾ ಮಾಸ್ ಮಿಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ಸಹಾಯಕ ಮಾಸ್ ಮಿಡಿಯಾ ಅಧಿಕಾರಿ ಪಿ.ಪಿ.ಹಸೀಬ್, ಕುಟುಂಬ ಆರೋಗ್ಯ ಕೇಂದ್ರದ ಪಳ್ಳಿಕ್ಕರ ಆರೋಗ್ಯ ನಿರೀಕ್ಷಕ ಪಿ.ವಿ.ಸಜೀವನ್, ಜಿಲ್ಲೆಯ ವಿವಿಧಆರೋಗ್ಯ ಸಂಸ್ಥೆಗಳ ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಆ್ಯಂಟಿಬಯೋಟಿಕ್ ದುರುಪಯೋಗದಿಂದಾಗಿ, ಅಪಾಯಕಾರಿ ಬ್ಯಾಕ್ಟೀರಿಯಾಗಳು ಬಲಗೊಂಡಿದ್ದು, ಅವುಗಳ ವಿರುದ್ಧ ಚಿಕಿತ್ಸೆ ನೀಡುವುದು ಕಷ್ಟಕರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ನವೆಂಬರ್ 18 ರಿಂದ 24 ರವರೆಗೆ ಆ್ಯಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (ಎಎಂಆರ್) ಜಾಗೃತಿ ವಾರವನ್ನು ಆಚರಿಸುತ್ತಿದೆ. 'ತಕ್ಷಣ ಕಾರ್ಯನಿರ್ವಹಿಸಿ-ನಮ್ಮ ಭವಿಷ್ಯವನ್ನು ರಕ್ಷಿಸಿ ಎಂಬ ಧ್ಯೇಯದೊಂದಿಗೆ ಆರೋಗ್ಯಕರ ಭವಿಷ್ಯ ಖಚಿತಪಡಿಸಿಕೊಳ್ಳಲು ಸಹಾಯಮಾಡುವ ರೀತಿಯಲ್ಲಿ ಜಾಗೃತಿ ಅಭಿಯಾನ ಆಯೋಜಿಸಲಾಗುತ್ತಿದೆ. ಆ್ಯಂಟಿಬಯೋಟಿಕ್ ಔಷಧಿಗಳ ದುರುಪಯೋಗದಿಂದ ಉಂಟಾಗುವ ಸೋಂಕುಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಜಾಗೃತಿ ಸಪ್ತಾಹದ ಉದ್ದೇಶವಾಗಿದೆ.
ಸಪ್ತಾಹದ ಅಂಗವಾಗಿ ಜಿಲ್ಲೆಯ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ.ವಿ. ರಾಮದಾಸ್ ಪ್ರಕಟಿಸಿದರು.





