ಕಾಸರಗೋಡು: ಪೆರಿಯದ ಕೇಂದ್ರೀಯ ವಿದ್ಯಾಲಯ ಸನಿಹದ ಕೊಡವಲಂ ಎಂಬಲ್ಲಿನ ಬೃಹತ್ ಕೆರೆಯೊಂದಕ್ಕೆ ಚಿರತೆ ಬಿದ್ದಿದ್ದು, ಊರವರು ಮತ್ತು ಅರಣ್ಯ ಇಲಾಖೆ ಸತತ ಕಾರ್ಯಾಚರಣೆಯಿಂದ ಚಿರತೆಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಮೇಲಕ್ಕೆತ್ತಲಾದ ಚಿರತೆಯನ್ನು ಕಾಞಂಗಾಡು ಅರಣ್ಯ ವಿಭಾಗ ಕಚೇರಿಗೆ ಸ್ಥಳಾಂತರಿಸಲಾಗಿದ್ದು, ಕಟ್ಟಡದ ಹಿಂಭಾಗದ ಪ್ರತ್ಯೇಕ ಜಾಗದಲ್ಲಿ ಗೂಡಿನಲ್ಲಿರಿಸಿ ಚಲನವಲನದ ಬಗ್ಗೆ ನಿರೀಕ್ಷಿಸಲಾಗುತ್ತಿದೆ.
ಕೊಡವಲಂ ದೇವಿ ಕ್ಲಬ್ ಸಮೀಪದ ಮಧು ಎಂಬವರ ಹಿತ್ತಿಲ ಕೆರೆಗೆ ಭಾನುವಾರ ಸಂಜೆ ಚಿರತೆ ಬಿದ್ದಿದೆ. ಕೆರೆಯಿಂದ ಮನೆ ಬಳಕೆಗಾಗಿ ನೀರು ಮೋಟಾರು ಬಳಸಿ ತೆಗೆಯಲಾಗುತ್ತಿದ್ದು, ಸ್ವಿಚ್ ಹಾಕಿದರೂ ನೀರು ಬಾರದಿರುವುದರಿಂದ ಅತ್ತ ತೆರಳಿ ನೋಡಿದಾಗ ಕೆರೆಗೆ ಅಳವಡಿಸಿದ್ದ ಪೈಪು ಹಿಡಿದು ಚಿರತೆ ನೀರಿನಲ್ಲಿ ನಿಂತಿರುವುದು ಕಂಡುಬಂದಿತ್ತು.ಪೈಪು ಅಲ್ಲಲ್ಲಿ ತೂತು ಬಿದ್ದಿದ್ದ ಹಿನ್ನಲೆಯಲ್ಲಿ ನೀರು ಮೇಲಕ್ಕೆಬರುತ್ತಿರಲಿಲ್ಲ. ಅರಣ್ಯ ಇಲಾಖೆಗೆ ನೀಡಿದ ಮಾಹಿತಿಯನ್ವಯ ಪ್ರತ್ಯೇಕ ಗೂಡನ್ನು ಇಳಿಸಿ ಸತತ ಪ್ರಯತ್ನದಿಂದ ಚಿರತೆಯನ್ನು ಗೂಡಿನೊಳಗೆ ಬಂಧಿಯಾಗಿಸುವಲ್ಲಿ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದರು. ಹಲವು ತಾಸುಗಳ ಕಾರ್ಯಾಚರಣೆಯಿಂದ ಚಿರತೆಯನ್ನು ಮೇಲಕ್ಕೆತ್ತಲಾಗಿತ್ತು.
ಚಿರತೆ ಕೆರೆಗೆ ಬಿದ್ದಿರುವ ವಿಷಯ ತಿಳಿದು ನೂರಾರು ಮಂದಿ ಇಲ್ಲಿ ಬಂದು ಸೇರಿದ್ದರು.
ಅರಣ್ಯ ಇಲಾಖೆ ಉತ್ತರ ವಲಯ ಹೊಣೆಗಾರಿಕೆ ಹೊಂದಿರುವ ಸರ್ಜನ್ ಡಾ. ಇಲ್ಯಾಸ್ ಸ್ಥಳಕ್ಕಾಗಮಿಸಿ ಚಿರತೆಯ ಆರೋಗ್ಯ ನಿರೀಕ್ಷಿಸುತ್ತಿದ್ದಾರೆ. ಸೋಮವಾರದಿಂದ ಚಿರತೆ ಆಹಾರ ಸೇವಿಸಲಾರಂಭಿಸಿದೆ. ಚಿರತೆಯನ್ನು ಕೂಡಿಹಾಕಿರುವ ಬೋನಿನ ಕಬ್ಬಿಣದ ಸರಳನ್ನು ಹಲ್ಲುಗಳಿಂದ ಕಡಿಯುವ ಸಾಧ್ಯತೆಯಿರುವುದರಿಂದ ಬೋನನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಜನರಿಗೆ ಚಿರತೆಯನ್ನು ವೀಕ್ಷಿಸುವುದಕ್ಕೆಅವಕಾಶ ನೀಡಲಾಗುತ್ತಿಲ್ಲ. ಒಂದು ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದೆ. ಚಿರತೆಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಪೆರಿಯ, ಬೊವಿಕ್ಕಾನ, ಮುಳಿಯಾರು, ಕಾನತ್ತೂರು ಆಸುಪಾಸು ಚಿರತೆ ಸಂಚರಿಸುತ್ತಿರುವ ಹಾಗೂ ಸಾಕು ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿರುವ ಹಲವಾರು ಪ್ರಕರಣ ನಡೆದಿದೆ.






