ಶ್ರೀನಗರ: ವೈದ್ಯಕೀಯ ಪದವೀಧರರು ಸೇರಿದಂತೆ ವಿದ್ಯಾವಂತರೇ 'ವೈಟ್ ಕಾಲರ್' ಭಯೋತ್ಪಾದನೆಯಲ್ಲಿ ತೊಡಗಿರುವುದು ಖಚಿತವಾಗುತ್ತಿದ್ದಂತೆಯೇ, ಕಳೆದೆರಡು ದಶಕಗಳಲ್ಲಿ ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಎಂಬಿಬಿಎಸ್ ವೈದ್ಯಕೀಯ ಪದವಿ ಪಡೆದವರ ಪರಿಶೀಲನೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ.
'2000ನೇ ಇಸವಿಯ ಆರಂಭದಿಂದಲೂ ನೂರಾರು ಕಾಶ್ಮೀರಿ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇನ್ನೂ ಅನೇಕರು ಬಾಂಗ್ಲಾದೇಶಕ್ಕೆ ತೆರಳಿ ಶಿಕ್ಷಣ ಪಡೆದಿದ್ದಾರೆ. ಹೀಗಾಗಿ, ಸಂಭಾವ್ಯ ಆರ್ಥಿಕ ವಹಿವಾಟು ಮತ್ತು ಗಡಿಯಾಚೆಗಿನ ಸಂಪರ್ಕ ಹೊಂದಿರುವವರ ಬಗ್ಗೆ ಈಗ ಮರುಪರಿಶೀಲನೆ ನಡೆಸಲಾಗುತ್ತಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
2001 ಮತ್ತು 2010ರ ನಡುವೆ ಮೊದಲ ಹಂತದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು, ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಪಾಕಿಸ್ತಾನದ ರಾವಲ್ಪಿಂಡಿ, ಅಬೋಟಾಬಾದ್, ಬಹವಾಲ್ಪುರ್, ಫೈಸಲಾಬಾದ್ ಮತ್ತು ಪೆಶಾವರದ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ.




