ಮುಳ್ಳೇರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾಸರಗೋಡು, ಕಾರಡ್ಕ ವಲಯದ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟಗಳಾದ ಬೆಳ್ಳೂರು, ಗಾಡಿಗುಡ್ಡೆ, ಮುಳ್ಳೇರಿಯ , ಮವ್ವಾರು, ಕಾಯರ್ಪದವು, ಕಿನ್ನಿಂಗಾರ್ ಹಾಗೂ ಸಾಮೂಹಿಕ ಸತ್ಯ ನಾರಾಯಣ ಪೂಜಾ ಸಮಿತಿ ಬೆಳ್ಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವು ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಅಖಿಲೇಶ್ ನಗುಮುಗಂ ಉದ್ಘಾಟಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಮಗ್ರ ಕಾರ್ಯಕ್ರಮವಾಗಿದ್ದು ಮಹಿಳಾ ಸಬಲೀಕರಣ, ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರಲ್ಲಿ ಕುಟುಂಬ ನಿರ್ವಹಣೆ, ಆರ್ಥಿಕ ವ್ಯವಹಾರ ಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಸ್ವಾವಲಂಬನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಗ್ರಾಮೀಣ ಅಭಿವೃದ್ಧಿಯ ಮೂಲಕ ಸಭಾಭವನ, ಭಜನಾ ಮಂದಿರ, ಅಂಗನವಾಡಿ, ಶೌಚಾಲಯ, ಮತ್ತು ಶಾಲೆಗಳಂತಹ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಗ್ರಾಮೀಣ ಜನರಿಗೆ ಕಿರುಸಾಲ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ. ಸಂಪನ್ಮೂಲ ಅಭಿವೃದ್ಧಿಗೋಸ್ಕರ ಯುವಕ ಮಂಡಲ ರಚನೆ, ಕೃಷಿ ಮೇಳ, ಮತ್ತು ತರಬೇತಿ ಕಾರ್ಯಕ್ರಮಗಳಂತಹ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ವಿಶೇಷ ಚೇತನರಿಗೆ ಸಹಾಯ ಮತ್ತು ಉಪಕರಣಗಳನ್ನು ಒದಗಿಸುತ್ತದೆ. ಜಾಗೃತಿಗಾಗಿ ಮದ್ಯವರ್ಜನ ಶಿಬಿರಗಳು, ಜನಜಾಗೃತಿ ಕಾರ್ಯಕ್ರಮಗಳು, ಮಾದಕವಸ್ತುಗಳ ಉಪಯೋಗಕ್ಕೆದುರಾಗಿ ತರಗತಿಗಳು ಮುಂತಾದವುಗಳ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ಕೊರಗಪ್ಪ ಬೆಳ್ಳಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಮುಖ್ಯ ಅತಿಥಿಯಾಗಿ ಮಾತನಾಡಿ, ಯೋಜನೆಯು ಜನ ಪರವಾದ ಕೆಲಸಗಳನ್ನು ಮಾಡುತ್ತಿದ್ದು ಸರ್ಕಾರ ಮಾಡುವ ಕೆಲಸಗಳಿಗೆ ಸಮನಾದ ಕೆಲಸ ಕಾರ್ಯಗಳನ್ನು ಗ್ರಾಮೀಣ ಜನರಿಗೆ ಹಾಗೂ ಅರ್ಹ ಫಲಾನುಭವಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯೋಜನೆಯ ಬಗ್ಗೆ ಅಪ ಪ್ರಚಾರಗಳನ್ನು ಕೆಲವು ದುಷ್ಟ ಶಕ್ತಿಗಳು ಮಾಡುತ್ತಿದ್ದು ಇವುಗಳ ಸತ್ಯಾಸತ್ಯತೆಯನ್ನು ತಿಳಿಯಬೇಕು ಎಂದು ಕರೆ ನೀಡಿದರು.
ಡಾ. ಮೋಹನದಾಸ್ ರೈ, ಮಹಾ ವಿಷ್ಣು ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಗಂಗಾಧರ ಬಲ್ಲಾಳ್, ಎಸ್ ಡಿ ಎಂ ಕಾಲೇಜಿನ ಪ್ರಾಧ್ಯಾಪಕಿ ಭವ್ಯಾ, ಲೋಕೇಶ್ ಬಲ್ಲಾಳ್, ವಲಯಾಧ್ಯಕ್ಷ ಸುರೇಶ್ ಯಾದವ್, ಯೋಜನಾಧಿಕಾರಿ ದಿನೇಶ್, ಸೇವಾ ಪ್ರತಿನಿಧಿಗಳಾದ ಜಯಲಕ್ಷ್ಮಿ, ಶಶಿಕಲಾ, ಬಿಂದಿಯಾ, ದಿವ್ಯಾ, ರೇಣುಕಾ, ಸಮಿತಿ ಪದಾಧಿಕಾರಿಗಳಾದ ದಾಕ್ಷಾಯಿಣಿ, ದಯಾನಂದ ರೈ , ಶ್ಯಾಮಲಾ ಸತೀಶ್, ಭಾಗೀರಥಿ ಮುಂತಾದವರು ಉಪಸ್ಥಿತರಿದ್ದರು.
ಯೋಜನೆಯಿಂದ ಮಂಜೂರಾದ ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರಾತಿ ಪತ್ರ ಮಾಶಾಸನ ಮಂಜೂರಾತಿ ಪತ್ರ ಹಾಗೂ ಕ್ರಿಟಿಕಲ್ ಇಲ್ಲ್ ನೆಸ್ ಫಂಡ್ ಮಂಜೂರಾತಿ ಪತ್ರವನ್ನು ಫಲಾನುಭವಿಗೆ ವಿತರಿಸಲಾಯಿತು
ಶ್ರೀ ಸತ್ಯನಾರಾಯಣ ತಂತ್ರಿಗಳು ಸತ್ಯನಾರಾಯಣ ಪೂಜೆಯ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಸಮಿತಿ ಕಾರ್ಯದರ್ಶಿ ಸತ್ಯ ನಾರಾಯಣ ಸ್ವಾಗತಿಸಿ ರಾಜೇಶ್ವರಿ ವಂದಿಸಿದರು. ಮೇಲ್ವಿಚಾರಕ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಶ್ರೀ ಸತ್ಯನಾರಾಯಣ ಬೆಳೇರಿ ಅವರನ್ನು ಸನ್ಮಾನಿಸಲಾಯಿತು.






