ಕಾಸರಗೋಡು: ಅಸ್ಸಾಂನ ತೇಜ್‍ಪುರ ಜಿಲ್ಲೆಯ ದೇಕ್ಯಾಜುಲಿ ಗ್ರಾಮದ ಸಿಂಗ್ರಿ ಗುಪ್ತೇಶ್ವರ ಮಹಾದೇವ ದೇವಸ್ಥಾನದಲ್ಲಿ ನವೆಂಬರ್ 23 ರಿಂದ 30 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಜ್ಞಕ್ಕೆ ಕಾಸರಗೋಡು ಜಿಲ್ಲೆಯ ಬೇಕಲ್ ಗೋಕುಲಂ ಗೋಶಾಲೆಯ ಪರಂಪರಾ ವಿದ್ಯಾಪೀಠವು ನಾಯಕತ್ವ ವಹಿಸಲಿದೆ.
ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಪರಂಪರಾ ವಿದ್ಯಾಪೀಠದ ಆಚಾರ್ಯ ವಿಷ್ಣುಪ್ರಸಾದ್ ಹೆಬ್ಬಾರ್ ಅವರ ನೇತೃತ್ವದಲ್ಲಿ ಸುಮಾರು ಎರಡು ನೂರ ಐವತ್ತು ಮಂದಿ ವೇದ ಪಂಡಿತರು ಕೇರಳ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಂದ ಈ ಯಜ್ಞದಲ್ಲಿ ಪಾಲ್ಗೊಳ್ಳಲಿದ್ದಾರೆ. ಉತ್ತರಪೂರ್ವ ಪ್ರದೇಶದ ಅತ್ಯಂತ ಪ್ರಾಚೀನ ಶಿವಕ್ಷೇತ್ರವಾಗಿರುವ ಈ ದೇವಸ್ಥಾನವು ಏಳನೇ ಶತಮಾನದಲ್ಲಿ ನಿರ್ಮಿತವಾದದ್ದು ಎಂದು ಹೇಳಲಾಗುತ್ತದೆ. ಪುರಾತತ್ವ ಇಲಾಖೆಯ ಅೀನದಲ್ಲಿರುವ ಈ ದೇವಸ್ಥಾನ ಬ್ರಹ್ಮಪುತ್ರಾ ನದಿಯ ತೀರದಲ್ಲಿ ನೆಲೆಸಿದೆ.
ಪ್ರಸಿದ್ಧ ವಾದ್ಯ ಕಲಾವಿದರಾದ ಪನಯಾಲ್ ಚಂದ್ರಶೇಖರ ಮಾರಾರ್ ಮತ್ತು ಮೋಹನನ್ ಮಾರಾರ್ ಸೇರಿದಂತೆ ಸುಮಾರು 12 ಮಂದಿ, ಮತ್ತು ರಂಜಿತ್, ವೈಕೋಂ ಪ್ರಸಾದ್, ಗೋಪಿ ನಾದಾಲಯ ಮುಂತಾದವರನ್ನು ಒಳಗೊಂಡ ಸುಮಾರು 30 ಮಂದಿ ಸಂಗೀತಜ್ಞರು ಕೂಡ ಈ ಅತಿರುದ್ರ ಮಹಾಯಜ್ಞದಲ್ಲಿ ಕೇರಳದಿಂದ ಪಾಲ್ಗೊಳ್ಳುತ್ತಾರೆ.
ದಕ್ಷಿಣ ಕನ್ನಡ, ಮೈಸೂರು, ಯಲ್ಲಾಪುರ ಪ್ರದೇಶಗಳಿಂದ ನೂರಕ್ಕೂ ಹೆಚ್ಚು ವೇದಪಂಡಿತರು ಯಾಗದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದ ಸಂಗೀತಜ್ಞರಾದ ಪಟ್ಟಾಭಿರಾಮ ಪಂಡಿತ್, ಕಾಂಚನ ಸಹೋದರಿಯರು, ಕೊಳಲು ವಿದ್ವಾಂಸರಾದ ಮೈಸೂರು ಚಂದನ್ ಕುಮಾರ್, ಹೇರಂಬ, ಹೇಮಂತ ಸಹೋದರರು, ವೀಣಾ ವಿದುಷಿ ಶ್ರೀಲತಾ ನಿಕ್ಷಿತ್ ಸೇರಿದಂತೆ ಕರ್ನಾಟಕದ ಅನೇಕ ಕಲಾವಿದರು ಸಹ ಅತಿರುದ್ರ ಮಹಾಯಾಗದಲ್ಲಿ ಕಲಾ ಸೇವೆ ಸಲ್ಲಿಸಲಿದ್ದಾರೆ.





