ಕಾಸರಗೋಡು: ಮತದಾರರ ಪಟ್ಟಿ ಪರಿಷ್ಕರಣೆ ವಿಷಯ ಮತ್ತು ಮತದಾರರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಚುನಾವಣಾ ಆಯೋಗದ ಕೈಗೊಳ್ಳುತ್ತಿರುವ ಉಪ ಕ್ರಮಗಳನ್ವಯ ಸ್ಯಾಂಡ್‍ಲೈನ್ಸ್ ಕೇರಳ ಅಭಿಯಾನಕ್ಕೆ ಸಂಬಂಧಿಸಿದಂತೆ ಬೇಕಲ್ ಬೀಚ್ ಪಾರ್ಕ್‍ನಲ್ಲಿ ನಿರ್ಮಿಸಿದ ಮರಳು ಶಿಲ್ಪ ಪ್ರವಾಸಿಗರ ಮನಸೂರೆಗೊಂಡಿತು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಇನ್ಬಾಶೇಖರ್ ಮರಳುಶಿಲ್ಪವನ್ನು ಉದ್ಘಾಟಿಸುವ ಮೂಲಕ ಸಾರ್ವಜನಿಕರ ವೀಕ್ಷಣೆಗೆ ಅನಾವರಣಗೊಳಿಸಿದರು. ಕೋಯಿಕ್ಕೋಡ್ ಎಸ್‍ಐಆರ್ ಜಾಗೃತಿ ಅಭಿಯಾನದ ಅಂಗವಾಗಿ, ಕೇಂದ್ರ ಚುನಾವಣಾ ಆಯೋಗದ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮರಳು ಶಿಲ್ಪವನ್ನು ನಡೆಯುತ್ತಿರುವ ಸ್ಯಾಂಡ್‍ಲೈನ್ಸ್ ಕೇರಳ ಅಭಿಯಾನದ ಜೊತೆಯಲ್ಲಿ ತಯಾರಿಸಲಾಗಿದ್ದು, ಎಣಿಕೆ ನಮೂನೆ, ಮತದಾರರ ಪಟ್ಟಿ, ಮತದಾನ ಯಂತ್ರ ಇತ್ಯಾದಿಗಳನ್ನು ಇದರಲ್ಲಿ ಒಳಪಡಿಸಲಾಗಿದೆ. ಮತದಾರರಿಗೆ ಎಸ್‍ಐಆರ್ ಬಗ್ಗೆ ತಿಳಿಸಿಕೊಡುವುದು ಉದ್ದೇಶವಾಗಿದ್ದು, ಅಭಿಯಾನದ ಅಮಗವಾಗಿ ವೀಡಿಯೊ ಪ್ರದರ್ಶನ, ನೋಟಿಸ್ ವಿತರಣೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗುರುಕುಲಂ ಬಾಬು ಅವರ ನೇತೃತ್ವದಲ್ಲಿ ಸನೋಜ್ ಕುರುವಲೂರು, ಬಿನೀಷ್ ಎಡಕ್ಕರ, ದಿಲ್ಶಾದ್ ಅಲಿನ್ ಚುವಡು, ಆದರ್ಶ ಅಲಿನ್ ಚುವಡು, ಅಟ್ಟಕೋಯ ಕುಟ್ಟಿಚ್ಚಿರ ನೇತೃತ್ವದ ಕಲಾವಿದರ ತಂಡ ಮರಳು ಶಿಲ್ಪ ರಚಿಸಿದೆ. ಕುಟುಂಬಶ್ರೀ ಸಹಾಯಕ ಜಿಲ್ಲಾ ಮಿಷನ್‍ಸಂಯೋಜಕ ಹರಿದಾಸ್, ಉದುಮ ಸಿಡಿಎಸ್ ಅಧ್ಯಕ್ಷೆ ಸನುಜಾ ಕೆ, ಸ್ವೀಪ್ ನೋಡಲ್ ಅಧಿಕಾರಿ ಕೆ.ರತೀಶ್ ಕುಮಾರ್ ಉಪಸ್ಥಿತರಿದ್ದರು. ಸ್ಯಾಂಡ್‍ಲೈನ್ಸ್ ಕೇರಳ ಅಭಿಯಾನದ ಸಂಯೋಜಕ ಅನ್ವರ್ ಪಳ್ಳಿಕಲ್, ತಂಡದ ಸದಸ್ಯರಾದ ಸಿ.ಅಸ್ಸಂ, ಎ.ಎಂ.ವಿಸ್ಮಯ, ಬೇಕಲ ಬೀಚ್ ಪಾರ್ಕ್ ವ್ಯವಸ್ಥಾಪಕ ನಿರ್ದೇಶಕ ಅನಸ್, ಉದುಮ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿಗಳಾದ ಜಿ.ಪ್ರಜಿತಾ, ಆರ್.ಅಭಿಲಾಷ್, ರಹೀದ ಉಪಸ್ಥಿತರಿದ್ದರು.





