ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇತ್ತೀಚೆಗಷ್ಟೆ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಷಟ್ಪಥ ಹಾದಿಯ ಕಾಸರಗೋಡು ಪ್ರದೇಶದ ಮೇಲ್ಸೇತುವೆಗೆ ಏಕಾಏಕಿ ನುಗ್ಗಿದ ಕೋಣಗಳ ಗುಂಪೊಂದು ಅಗ್ನಿಶಾಮಕ ದಳ ಹಾಗೂ ಹೆದ್ದಾರಿ ಪ್ರಾಧಿಕಾರ ಸಿಬ್ಬಂದಿಯನ್ನು ತಾಸುಗಳ ಕಾಲ ಪರಿತಪಿಸುವಂತೆ ಮಾಡಿದೆ.
ಇತ್ತೀಚೆಗಷ್ಟೆ ಕಾಮಗಾರಿ ಪೂರ್ತಿಗೊಂಡು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದ ಹೆದ್ದಾರಿಗೆ ಎಲ್ಲಿಮದಲೋ ಆಗಮಿಸಿದ ಇಪ್ಪತ್ತರಷ್ಟು ಕೋಣಗಳು ಪ್ರವೇಶಿಸಿದೆ. ಅತಿಯಾದ ವೇಗದಿಂದ ವಾಹನಗಳು ಸಂಚರಿಸುವ ಮೇಲ್ಸೇತುವೆ ಇದಾಗಿದ್ದು, ಒಂದು ಕಡೆಯಿಂದ ಪ್ರವೇಶಿಸಿದರೆ, ಒಂದರಿಂದ ಎರಡು ಕಿಲೋಮೀಟರ್ ದೂರಕ್ಕೆ ಸಾಗಿದ ನಂತರವಷ್ಟೆ ಸರ್ವೀಸ್ ರಸ್ತೆಗೆ ಇಳಿಯಲು ಅವಕಾಶವಿದೆ. ಮೇಲ್ಸೇತುವೆಗೆ ಸಂಚರಿಸಿದ ಕೋಣಗಳು ರಸ್ತೆಯಲ್ಲಿ ಅಪಾಯಕಾರಿಯಾಗಿ ಸಂಚರಿಸುವುದನ್ನು ಮನಗಂಡ ಹೆದ್ದಾರಿ ಪರಾಧಿಕಾರದ ಸಿಬ್ಬಂದಿ ಕೋಣಗಳ ಗುಂಪಿನ ಹಿಂದಿನಿಂದ ಸಾಗಿ ವಾಹನಗಳಿಗೆ ವೇಗ ಕಡಿತಗೊಳಿಸಿ ಸಾಗುವಂತೆ ನಿರ್ದೇಶ ನೀಡಿದ್ದಾರೆ. ಕೋಣಗಳ ಪುಂಡಾಟಿಕೆಯಿಂದ ವಾಃನಗಳ ಸಂಚಾರಕ್ಕೆ ತಡೆಯಾಗುತ್ತಿರುವುದನ್ನು ಗಮನಿಸಿದ ಹೆದ್ದಾರಿ ಪ್ರಾಧಿಕಾರ ಸಿಬ್ಬಂದಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಅವರ ಸಹಾಯದಿಂದ ಕೊನೆಗೂ ಹೆದ್ದಾರಿಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಸಾಯಿಗಾಗಿ ಕೋಣಗಳನ್ನು ತಂದು ಕೆಲವರು ಸಾಕುತ್ತಿದ್ದು, ಇವುಗಳನ್ನು ಮೇವಿಗಾಗಿ ರಸ್ತೆ ಅಂಚಿಗೆ ಬಿಟ್ಟು ತಮ್ಮಷ್ಟಕ್ಕೆ ತೆರಳುತ್ತಾರೆ. ಇವುಗಳು ಕೃಷಿಭೂಮಿಗೆ ಹಾನಿಯೆಸಗುವುದರ ಜತೆಗೆ ಊರವರಿಗೆ ಉಪಟಳಕ್ಕೂ ಕಾರಣವಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಅನಧಿಕೃತ ಕಸಾಯಿಖಾನೆಗಳು ತುಂಬಿಕೊಂಡು, ಇವುಗಳ ತ್ಯಾಜ್ಯವನ್ನು ಸಆರ್ವಜನಿಕ ಸಥಳದಲ್ಲಿ ಸುರಿಯಲಾಗುತ್ತಿದ್ದು, ಇದರಿಂದ ಬೀದಿನಾಯಿಗಳ ಉಪಟಳವೂ ಹೆಚ್ಚಲು ಕಾರಣವಾಗುತ್ತಿದೆ.
ಇತ್ತೀಚೆಗಷ್ಟೆ ಕಾಸರಗೋಡಿನಲ್ಲಿ ಕಸಾಯಿಖಾನೆಗೆ ಕೊಂಡೊಯ್ಯುವ ಮಧ್ಯೆ ಕೋಣವೊಂದು ಹಗ್ಗಬಿಚ್ಚಿ ಓಡಿ ಹಲವರನ್ನು ತಿವಿದು ಗಾಯಗೊಳಿಸಿದ ಘಟನೆ ನಡೆದಿತ್ತು.




