ಕಾಸರಗೋಡು: ಚೆರ್ಕಳ ಸನಿಹ ಬೇವಿಂಜೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಧ್ಯೆ ಮನೆಯೊಂದರ ಎದುರು ಭಾಗವನ್ನು ಕೆಡಹುವ ವಿಚಾರದಲ್ಲಿ ಮನೆಯವರು ವಿರೋಧ ವ್ಯಕ್ತಪಡಿಸಿ, ಸಾಮೂಹಿಕ ಆತ್ಮಹತ್ಯೆಯ ಬೆದರಿಕೆಯೊಡ್ಡಿ, ಪೆಟ್ರೋಲ್ ಹಾಗೂ ಗ್ಯಾಸ್ ಸಿಲಿಂಡರ್‍ನೊಂದಿಗೆ ಮನೆ ಟೆರೇಸ್ ಏರಿ ನೆರೆದವರನ್ನು ಆತಂಕಕ್ಕೆ ತಳ್ಳಿದ ಘಟನೆ ನಡೆದಿದೆ.
ಮನೆಯವರ ಬೆದರಿಕೆ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಗುತ್ತಿಗೆದಾರರು, ನಾಗರಿಕರು ಸ್ಥಳಕ್ಕಾಗಮಿಸಿ ಮನವೊಲಿಸಲು ಯತ್ನಿಸಿದರೂ, ಇದಕ್ಕೆ ಮನೆಯವರು ಮುಂದಾಗಲಿಲ್ಲ. ಮಹಿಳಾ ಪೊಲೀಸ್ ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಪೊಲೀಸರೂ ಸ್ಥಳಕ್ಕಾಗಮಿಸಿದ್ದರು. ನಂತರ ಶಾಸಕ ಎನ್.ಎ ನೆಲ್ಲಿಕುನ್ನು ಸೇರಿದಂತೆ ಜನಪ್ರತಿನಿಧಿಗಳೂ ಆಗಮಿಸಿದ್ದರು.
ತೆಕ್ಕಿಲ್ ನಿವಾಸಿ ಎಂ.ಟಿ ಅಬ್ದುಲ್ ಬಶೀರ್, ಎಂ.ಟಿ ಅಹಮ್ಮದಲಿ ಎಂಬವರ ಮನೆ ರಸ್ತೆ ಅಂಚಿಗಿದ್ದು, ಮನೆ ತೆರವುಗೊಳಿಸುವ ಬಗ್ಗೆ 1.28ಕೋಟಿ ರೂ. ಪರಿಹಾರಕ್ಕೆ ಮನೆಯವರು ದಾವೆ ಹೂಡಿದ್ದು, ಪ್ರಕರಣ ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟಿನಲ್ಲಿರುವುದಾಗಿ ಮಾಹಿತಿಯಿದೆ.
ಈ ಮಧ್ಯೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಾತುಕತೆ ನಡೆದು, ಪರಿಹಾರ ಮೊತ್ತ ನೀಡಲು ನಿರ್ದೇಶಿಸಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದರ ವಿರುದ್ಧ ತಡೆಯಾಜ್ಞೆ ಲಭಿಸಿರುವುದಾಗಿ ತಿಳಿಸಿ ಕಾಮಗಾರಿ ಮುಂದುವರಿಸಲು ಯತ್ನಿಸುತ್ತಿದ್ದಂತೆ ಮನೆಯವರು ಕಾಮಗಾರಿಗೆ ತಡೆಯೊಡ್ಡಿ, ಸಾಮೂಹಕ ಆತ್ಮಹತ್ಯೆಯ ಬೆದರಿಕೆಯೊಡ್ಡಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸೋಮವಾರ ಮತ್ತೆ ಚರ್ಚೆ ನಡೆಸುವ ಭರವಸೆಯೊಂದಿಗೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಯಿತು.




