ಕಾಸರಗೋಡು: ಕೇರಳ ಕಡು ಬಡತನದಿಂದ ಮುಕ್ತವಾಗಿದೆ ಎಂಬ ಘೋಷಣೆ ಕೇವಲ ರಾಜಕೀಯ ಹೇಳಿಕೆಯಾಗಿದ್ದು, ಈ ಮೂಲಕ ಕೇರಳದ ಲಕ್ಷಾಂತರ ಬಡ ಬುಡಕಟ್ಟು ಕುಟುಂಬಗಳನ್ನು ಸರ್ಕಾರ ವಂಚಿಸಿರುವುದಾಗಿ ಪರಿಶಿಷ್ಟ ಪಂಗಡ ಮೋರ್ಚಾ ರಾಜ್ಯ ಅಧ್ಯಕ್ಷ ಮುಕುಂದನ್ ಪಲ್ಲಿಯಾರ ಹೇಳಿದರು. ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಸಭಾಂಗಣದಲ್ಲಿ ಎಸ್‍ಟಿ ಮೋರ್ಚಾ ಕಾಸರಗೋಡು ಜಿಲ್ಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಡತನ ಮುಕ್ತ ರಾಜ್ಯ ಎಂಬ ಸುಳ್ಳು ಘೋಷಣೆಯಿಂದ ರಾಜ್ಯದ ಬುಡಕಟ್ಟು ಜನಾಂಗದವರಿಗೆ ನ್ಯಾಯಯುತವಾಗಿ ಲಭಿಸಬೇಕಾದ ಆರ್ಥಿಕ ಪ್ರಯೋಜನ ಸೇರಿದಂತೆ ವಿವಿಧ ಸವಲತ್ತುಗಳನ್ನು ಎಡರಂಗ ಸರ್ಕಾರ ಹಾದಿತಪ್ಪಿಸಿ ವಿನಿಯೋಗಿಸಲು ತಯಾರಿ ನಡೆಸುತ್ತಿದೆ ಎಂಬ ಅನುಮಾನ ಕಾಡಲಾರಂಭಿಸಿದೆ ಎಂದು ತಿಳಿಸಿದರು.
ಎಸ್.ಟಿ ಮೋರ್ಚಾ ಜಿಲ್ಲಾ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನೀಲ್, ಎನ್.ಬಾಬುರಾಜ್, ಜಿಲ್ಲಾ ಕಾರ್ಯದರ್ಶಿ ಸಂಜೀವ ಪುಳಿಕ್ಕೂರು, ಎಸ್‍ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಟಿ.ಡಿ.ಭರತನ್, ಶಿಬು ಪಾಣತ್ತೂರು, ರಾಜ್ಯ ಸಮಿತಿ ಸದಸ್ಯ ಕೆ.ಟಿ. ಈಶ್ವರ ಮಾಸ್ಟರ್, ಕಾರ್ಯದರ್ಶಿಗಳಾದ ಉಣ್ಣಿಕೃಷ್ಣನ್ ಕೆ. ಮತ್ತು ಹರೀಶ್ ಕೊಲ್ಲಂಗಾನ ಉಪಸ್ಥಿತರಿದ್ದರು.





