ಕಾಸರಗೋಡು: ಕೇರಳ ರಾಜ್ಯೋದಯ ಅಂಗವಾಗಿ ಜಿಲ್ಲಾ ವಾರ್ತಾ ಕಚೇರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಡಳಿತ ಭಾಷಾ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡದಿದ್ದಲ್ಲಿ, ಸಂಸ್ಕøತಿ ಉಳಿಯಲು ಸಾಧ್ಯವಿಲ್ಲ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದ ಜನರಿಗೆ ತಮ್ಮ ಮಾತೃಭಾಷೆಗಿಂತ ಆಂಗ್ಲ ಭಾಷೆ ಮೇಲಿನ ಮೋಹ ಹೆಚ್ಚಾಗುತ್ತಿರುವುದು ವಿಷಾದನೀಯ. ಆಂಗ್ಲ ಭಾಷೆ ಇರಲಿ, ಜತೆಗೆ ಮಾತೃ ಭಾಷೆಯಿಂದ ವಿಮುಖರಾಗದಂತೆ ನಮ್ಮ ಮಕ್ಕಳನ್ನು ಪ್ರೇರೇಪಿಸಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್ಚುವರಿ ಜಿಲ್ಲಾ ದಂಡಾಧಿಕರಿ(ಎಡಿಎಂ) ಪಿ.ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಲ್ಯಾಂಡ್ ಅಸೈನ್‍ಮೆಂಟ್ ಸಹಾಯಕ ಜಿಲ್ಲಾಧಿಕಾರಿ ಎಂ. ರಮಿಸ್ ರಾಜ ಅವರು ಮಲಯಾಳಂ ದಿನದ ಸಂದೇಶ ಮತ್ತು ಆಡಳಿತ ಭಾಷಾ ಪ್ರತಿಜ್ಞೆ ಬೋಧಿಸಿದರು. ಮಲಯಾಳಂ ಭಾಷೆಯ ಪೆÇೀಷಣೆಗೆ ಗಮನಾರ್ಹ ಕೊಡುಗೆ ನೀಡಿದ ಪ್ರಮುಖ ಮಲಯಾಳಂ ಬರಹಗಾರ್ತಿ ಸೀತಾದೇವಿ ಕರಿಯಾಟ್ ಮತ್ತು ಕನ್ನಡ, ತುಳು ಬರಹಗಾರ್ತಿ ಕುಶಲಾಕ್ಷಿ ಕುಲಾಲ್. ಕೆ. ಅವರನ್ನು ಸನ್ಮಾನಿಸಲಾಯಿತು. ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕ ಆರ್. ಶೈನಿ, ಎಂಡೋಸಲ್ಫಾನ್ ವಿಶೇಷ ಘಟಕದ ಉಪ ಜಿಲ್ಲಾಧಿಕಾರಿ ಲಿಪು ಎಸ್. ಲಾರೆನ್ಸ್, ಅಕ್ಷರ ಗ್ರಂಥಾಲಯದ ಅಧ್ಯಕ್ಷ ಎ. ಆಶಾಲತಾ, ಕವಿ ರವೀಂದ್ರನ್ ಪಾಡಿ, ಜಿಲ್ಲಾ ಮಾಹಿತಿ ಕಚೇರಿಯ ಸಹಾಯಕ ಸಂಪಾದಕಿ ಎ.ಪಿ. ದಿಲ್ನಾ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ವಾರ್ತಾ ಕಚೇರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೇತೃತ್ವದಲ್ಲಿ ಆಡಳಿತ ಭಾಷಾ ವಾರಾಚರಣೆಯ ಅಂಗವಾಗಿ 'ಕೇಳಿ ಬರೆಯಿರಿ' ಎಂಬ ಲೇಖನ ಸ್ಪರ್ಧೆಯಲ್ಲಿ ಆರ್ಥಿಕ ಮತ್ತು ಅಂಕಿಅಂಶಗಳ ಇಲಾಖೆಯ ಯು.ಡಿ ಟೈಪಿಸ್ಟ್ ಕೆ.ವಿ. ಶೀಬಾ ಅವರು ಪ್ರಥಮ ಮತ್ತು ಅಬಕಾರಿ ವಿಭಾಗ ಕಚೇರಿಯ ಸಹಾಯಕ ಅಬಕಾರಿ ಆಯುಕ್ತರು ಹಾಗೂ ವಿಮುಕ್ತಿ ವ್ಯವಸ್ಥಾಪಕ ಪಿ. ಅನ್ವರ್ ಸಾದತ್ ಅವರು ದ್ವಿತೀಯ ಸ್ಥಾನ ಗಳಿಸಿದ್ದು, ಇವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಸ್ವಾಗತಿಸಿದರು. ಜಿಲ್ಲಾ ಮಾಹಿತಿ ಕಚೇರಿಯ ಎ.ಐ.ಒ. ಎಸ್. ಚಿಲಂಕ ವಂದಿಸಿದರು.





