ಮಂಜೇಶ್ವರ: ನಿಯೋಜಿತ ಚೆಕ್ ಪೋಸ್ಟ್‍ಗಾಗಿ ಮೀಸಲಿರಿಸಿದ್ದ ಮಂಜೇಶ್ವರ ಹೊಸಂಗಡಿ ಸನಿಹದ ರಸ್ತೆ ಅಂಚಿಗೆ ವಿಶ್ರಾಂತಿ ನಿಲ್ದಾಣದ ಬೃಹತ್ ಯೋಜನೆಯೊಂದು ತಲೆಯೆತ್ತುತ್ತಿದೆ. ಹೊಸಂಗಡಿ ಮತ್ತು ವಾಮಂಜೂರು ಚೆಕ್ ಪೆÇೀಸ್ಟ್ ನಡುವಿನ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ವಿಶಾಲ ಜಾಗದಲ್ಲಿ ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಓವರ್ಸೀಸ್ ಕೇರಳೈಟ್ಸ್ ಇನ್ವೆಸ್ಟ್‍ಮೆಂಟ್ ಮತ್ತು ಹೋಲ್ಡಿಂಗ್ ಲಿಮಿಟೆಡ್ (ಓಕೆಐಎಚ್‍ಎಲ್) ಯೋಜನೆಗಾಗಿ ಐದು ಎಕರೆ ಭೂಮಿಯನ್ನು ಕೇರಳ ಸರ್ಕಾರ ಮಂಜೂರುಗೊಳಿಸಿದೆ. ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಕೇರಳದ 30 ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಬದಿಯ ಸೌಲಭ್ಯಗಳ (ವಿಶ್ರಾಂತಿ ನಿಲ್ದಾಣಗಳು) ಜಾಲವನ್ನು ರಚಿಸುತ್ತಿರುವ ಓಕೆಐಎಚ್‍ಎಲ್ ನ ಪ್ರಮುಖ ಯೋಜನೆಗಳಲ್ಲಿ ಇದು ಒಂದಾಗಿದೆ.
ವಿಶ್ರಾಂತಿ ಕೇಂದ್ರಗಳಲ್ಲಿ ರೆಸ್ಟೋರೆಂಟ್, ಫುಡ್ ಕೋರ್ಟ್, ಕನ್ವೀನಿಯನ್ಸ್ ಸ್ಟೋರ್, ಕ್ಲಿನಿಕ್, ಇಂಧನ ನಿಲ್ದಾಣ, ವಾಹನ ನಿರ್ವಹಣಾ ಸೌಲಭ್ಯ, ಕ್ಯಾರವಾನ್ ಪಾಕಿರ್ಂಗ್, ಗುಣಮಟ್ಟದ ಶೌಚಗೃಹ ಸಮುಚ್ಛಯ, ಮೋಟೆಲ್ ಕೊಠಡಿಗಳು, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಸಮ್ಮೇಳನ ಮತ್ತು ಸಭಾಂಗಣ ಇದರಲ್ಲಿ ಒಳಗೊಂಡಿದೆ. ಓಕೆಐಎಚ್‍ಎಲ್ ಮತ್ತು ಸರ್ಕಾರದ ಜಂಟಿ ಉದ್ಯಮವಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಜಿಎಸ್‍ಟಿ ಜಾರಿಯೊಂದಿಗೆ, ಹೊಸಂಗಡಿ ಬಳಿ ಕಾರ್ಯನಿರ್ವಹಿಸುತ್ತಿದ್ದ ವಾಣಿಜ್ಯ ತೆರಿಗೆ ಚೆಕ್‍ಪೆÇೀಸ್ಟ್ ತನ್ನ ಚಟುವಟಿಕೆ ಸ್ಥಗಿತಗೊಳಿಸಿದ್ದ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ರಾಷ್ಟ್ರೀಯ ಹೆದ್ದಾರಿ ಬಳಿ ಹೊಂದಿದ್ದ ಒಂಬತ್ತು ಎಕರೆಗೂ ಹೆಚ್ಚು ಭೂಮಿಯಲ್ಲಿ ಐದು ಎಕರೆ ಭೂಮಿಯನ್ನು ಯೋಜನೆಗಾಗಿ ಹಸ್ತಾಂತರಿಸಲಾಗಿದೆ. 35 ಕೋಟಿಗೂಹೆಚ್ಚು ವೆಚ್ಚದ ಈ ಯೋಜನೆಯನ್ನು 'ಕಿಫ್‍ಬಿ' ಸಹಾಯದಿಂದ ಕಾರ್ಯಗತಗೊಳಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಸೇವೆಗಳು ಇಲ್ಲಿ ಲಭ್ಯವಿರಲಿದೆ. ಲುಲು ಗ್ರೂಪ್‍ಗೆ ಸೇರಿದ ಎಲ್ಲಾ ಸ್ಟಾಲ್‍ಗಳು ಇಲ್ಲಿರಲಿದೆ. ಎರಡು ವರ್ಷಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಉರಾಲುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರಿ ಸಂಘವು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದೆ.
ಹಿಂದುಳಿದ ಮಂಜೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಈ ಬೃಹತ್ ಯೋಜನೆಯನ್ನು ಸರ್ಕಾರ ಮಂಜೂರುಗೊಳಿಸಿದೆ.





