ಕಾಸರಗೋಡು: ಮುಂಬರುವ ಸ್ಥಳೀಯಾಡಳಿತ ಹಾಗೂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಎಲ್‍ಓಗಳ ಮೂಲಕ ಮತದಾರರಿಗೆ ನೀಡುತ್ತಿರುವ ಗಣತಿ ನಮೂನೆ(ಎನ್ಯುಮರೇಟ್ ಫಾರ್ಮ್) ಮಲಯಾಳದಲ್ಲಿ ಮಾತ್ರ ವಿತರಣೆಯಾಗುತ್ತಿದ್ದು, ಇದರಿಂದ ಕನ್ನಡಿಗರು ಸಮಸ್ಯೆ ಎದುರಿಸುವಂತಾಗಿದೆ. ಈಗಾಗಲೇ ಕನ್ನಡದಲ್ಲೂ ಎನ್ಯುಮರೇಟ್ ಫಾರ್ಮ್ ವಿತರಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ರಂಗಕ್ಕಿಳಿದಿದೆ. ಈ ಬಗ್ಗೆ ವಾಟ್ಸಪ್ ಗ್ರೂಪ್‍ಗಳ ಮೂಲಕ ಮಲಯಾಳ ಅರ್ಜಿಗಳನ್ನು ಬಹಿಷ್ಕರಿಸಿ, ಕನ್ನಡದಲ್ಲಿ ಎನ್ಯುಮರೇಟ್ ಫಾರ್ಮ್ ಲಭ್ಯವಾಗುವಂತೆ ಮಾಡಲು ಒತ್ತಡ ಹೇರುವಂತೆ ಪ್ರಚಾರಭಿಯಾನವನ್ನೂ ಆರಂಭಿಸಲಾಗಿದೆ.
ಮಲಯಾಳದ ಎನ್ಯುಮರೇಟ್ ಫಾರ್ಮ್ ಭರ್ತಿಗೊಳಿಸಲು ಕನ್ನಡಬಲ್ಲ ಬಿಎಲ್‍ಓಗಳೂ ಪರದಾಡಬೇಕಾಗಿದೆ. ಇನ್ನು ಮಾಹಿತಿ ಒದಗಿಸುವ ಮತದಾರರಿಗೆ ಅದರಲ್ಲಿ ಏನು ನಮೂದಿಸಲಾಗಿದೆ ಎಂಬುದನ್ನೂ ಅರ್ಥೈಸಿಕೊಳ್ಳಲಾಗದ ಸ್ಥಿತಿಯಿದೆ. ಒಂದುವೇಳೆ ಎನ್ಯುಮರೇಟ್ ಫಾರ್ಮ್ ಭರ್ತಿಗೊಳಿಸುವಲ್ಲಿ ಲೋಪ ಉಂಟಾದರೆ ಮತದಾನದ ಹಕ್ಕಿನಿಂದ ವಂಚಿತವಾಗಬೇಕಾದ ಭೀತಿಯೂ ಎದುರಾಗುತ್ತಿದೆ. ಮಲಯಾಳದ ಜತೆಗೆ ಆಂಗ್ಲಭಾಷೆಯಲ್ಲಿ ಲಭ್ಯವಾಗುತ್ತಿದ್ದರೂ, ಕನಿಷ್ಠ ಮಲಯಾಳ ಅರಿಯದ ಬಿಎಲ್‍ಓಗಳಿಗೆ ಒಂದಷ್ಟು ಸಹಕಾರಿಯಾಗುತ್ತಿತ್ತು. ಎನ್ಯುಮರೇಟ್ ಫಾರ್ಮ್ ಮೂಲಕವೂ ಸರ್ಕಾರ ಕನ್ನಡಿಗರ ಮೇಲೆ ಮಲಯಾಳ ಹೇರಿಕೆ ಮಾಡುತ್ತಿರುವುದಾಗಿ ಆರೋಪ ಕೇಳಿಬರಲಾರಂಭಿಸಿದೆ.




