ಕಾಸರಗೋಡು: ಉಪಜಿಲ್ಲಾ ಶಾಲಾ ಕಲೋಲೋತ್ಸವಕ್ಕೆ ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಸೋಮವಾರ ಚಾಲನೆ ನೀಡಿದರು. ನಗರಸಭಾ ಅಧ್ಯಕ್ಷ, ಸಂಘಟನಾ ಸಮಿತಿಯ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದ್ದರು. ಕೇರಳ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತ ಮತ್ತು ರಿಯಾಲಿಟಿ ಶೋ ತಾರೆ ಸುರೇಶ್ ಪಲ್ಲಿಪ್ಪರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉದ್ಘಾಟನೆ ನಂತರ ವೇದಿಕೆ ಸ್ಪರ್ಧೆಗಳು ಆರಂಭಗೊಂಡಿತು. ನ. 5ರಂದು ಶಾಲಾಕಲೋತ್ಸವ ಸಮಾರೋಪಗೊಳ್ಳಲಿದೆ. ಅಕ್ಟೋಬರ್ 30ಹಾಗೂ 31ರಂದು ವೇದಿಕೇತರ ಸಪರ್ಧೆಗಳನ್ನು ಆಯೋಜಿಸಲಗಿತ್ತು.
ಉಪಜಿಲ್ಲೆಯ 140ರಷ್ಟು ಶಾಲೆಗಳ 7654ಮಂದಿ ಸ್ಪರ್ಧಾಳುಗಳು 14ವೇದಿಕೆಗಳಲ್ಲಿ ನಡೆಯಲಿರುವ 314 ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ವರ್ಷ ಕೆಲವೊಂದು ಸ್ಪರ್ಧೆಗಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿರುವುದರಿಂದ ಕಳೆದ ವರ್ಷಕ್ಕಿಂತ ಸುಮಾರು 3000 ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದು, ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಆರು ವೇದಿಕೆಗಳಲ್ಲದೆ, ಮಹಿಳಾ ಸಭಾಂಗಣ, ಚಿನ್ಮಯ ವಿದ್ಯಾಲಯ ಸಭಾಂಗಣ, ನಗರಸಭೆಯ ಸಮ್ಮೇಳನ ಸಭಾಂಗಣ, ಗ್ರಂಥಾಲಯ ಸಭಾಂಗಣ, ಪುರಭವನ ಮತ್ತು ಸಂಧ್ಯಾರಾಗಂ ಸಭಾಂಗಣ ಸೇರಿದಂತೆ ನಗರಸಭಾ ಕಚೇರಿಯ ಬಳಿ ಸುಮಾರು ಎಂಟು ವೇದಿಕೆಗಳನ್ನು ಸ್ಥಾಪಿಸಲಾಗಿದೆ.


