ದೆಹಲಿಯಲ್ಲಿ ನಡೆಯಲಿದ್ದ ಬಿಸಿನೆಸ್ ಮೀಟ್‌ಗಾಗಿ ಅರ್ಜೆಂಟಲ್ಲಿ ಏರ್‌ಪೋರ್ಟಿಗೆ ಹೊರಟಿದ್ದ ಪಂಚಮಿಗೆ ಅರ್ಧ ದಾರಿಗೆ ಬರುವಾಗ ಆಧಾರ್ ಮರೆತಿರುವುದು ನೆನಪಾಗಿ ದಿಕ್ಕೇ ತೋಚದಾಯ್ತು. ವಾಪಾಸ್ ಮನೆಗೆ ಹೋದರೆ ಫ್ಲೈಟ್ ಮಿಸ್ ಆಗುತ್ತದೆ. ಆಕೆಯ ಕ್ಲೈಂಟ್ ಕೈತಪ್ಪುತ್ತಾರೆ.
ಕುದುರಬೇಕಿದ್ದ ವ್ಯವಹಾರವೊಂದು ಹುಟ್ಟುವ ಮೊದಲೇ ಕಣ್ಮುಚ್ಚುತ್ತದೆ. ಆಗ ಆಕೆಯ ನೆರವಿಗೆ ಬಂದದ್ದು ಆಧಾರ್ ಆಯಪ್. ಆ ಕ್ಯಾಬ್ ಓಡಿಸುತ್ತಿದ್ದ ಯುವಕ ಪಂಚಮಿಗೆ ಇದನ್ನು ಪರಿಚಯಿಸಿದ್ದ. ಸಣ್ಣ ಟೆನ್ಶನ್‌ನಲ್ಲೇ ಆಕೆ ಮೊಬೈಲ್‌ನಲ್ಲಿ ಆಯಪ್ ಮೂಲಕ ಆಧಾರ್ ತೋರಿಸಿದರೆ ಏರ್‌ಪೋರ್ಟ್ ಅಧಿಕಾರಿಗಳು ಸಣ್ಣದೊಂದು ತಕರಾರೂ ತೆಗೆಯದೇ ಆಕೆಯನ್ನು ಒಳಬಿಟ್ಟರು.
ಇಲ್ಲೀವರೆಗೆ ಆಧಾರ್ ಪೇಪರ್ ಕಾಪಿಗಳಿಗೆ ಇದ್ದ ಮಾನ್ಯತೆ ಸಾಫ್ಟ್‌ಕಾಪಿಗಳಿಗೆ ಇರಲಿಲ್ಲ. ಆದರೆ ಈಗ ಯುಐಡಿಎಐ ಹೊಸ ಆಧಾರ್ ಆಯಪ್ ಬಿಡುಗಡೆ ಮಾಡಿದ್ದು ಇದು ಕಾಗದ ರೂಪದ ಆಧಾರ್ ಕಾರ್ಡ್‌ನಷ್ಟೇ ಮಾನ್ಯತೆ ಪಡೆದಿದೆ. ಈ ಡಿಜಿಟಲ್ ಆಯಪ್ ಈಗಾಗಲೇ ಆಂಡ್ರಾಯ್ಡ್ ಮತ್ತು ಐಓಎಸ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಲಭ್ಯ.
ಆಯಪ್‌ನ ವಿಶೇಷತೆ ಏನು?
ಪ್ರಮುಖ ಅಂಶ ಸುರಕ್ಷತೆ ಮತ್ತು ಗೌಪ್ಯತೆ. ಇಲ್ಲಿ ಆಧಾರ್ ಅನ್ನು ಕ್ಯೂಆರ್ ಕೋಡ್ ಮುಖಾಂತರ ಹಂಚಿಕೊಳ್ಳಬಹುದು. ಆದರೆ ನಿಯಂತ್ರಣ ನಮ್ಮ ಕೈಯಲ್ಲೇ ಇರುತ್ತದೆ. ಅಂದರೆ ಇದರಲ್ಲಿ ನೀವು ಕೇವಲ ಹೆಸರು ಮತ್ತು ಫೋಟೋ ಮಾತ್ರ ಹಂಚಿಕೊಂಡು ವಿಳಾಸ, ಜನ್ಮ ದಿನಾಂಕದಂತಹ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಯೇ ಇಟ್ಟುಕೊಳ್ಳಬಹುದು.
ಬಯೋಮೆಟ್ರಿಕ್ ಲಾಕ್ ಮತ್ತು ಟ್ರ್ಯಾಕಿಂಗ್ ಸೌಲಭ್ಯ
ಹೊಸ ಆಯಪ್‌ನಲ್ಲಿ ಬಯೋಮೆಟ್ರಿಕ್ ಡೇಟಾವನ್ನು (ಉದಾ: ಬೆರಳ ಗುರುತು, ಕಣ್ಣಿನ ಗುರುತು) ಲಾಕ್ ಅಥವಾ ಅನ್‌ಲಾಕ್ ಮಾಡಬಹುದು. ಜೊತೆಗೆ ನಿಮ್ಮ ಆಧಾರ್ ಎಲ್ಲಿ ಮತ್ತು ಯಾವ ಸಮಯದಲ್ಲಿ ಬಳಕೆ ಆಯಿತು ಎನ್ನುವುದನ್ನೂ ಟ್ರ್ಯಾಕ್ ಮಾಡಲು ಅವಕಾಶ ನೀಡಲಾಗಿದೆ. ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳನ್ನು ಒಂದೇ ಸ್ಥಳದಲ್ಲಿ ಸುರಕ್ಷಿತವಾಗಿ ಸೇವ್ ಮಾಡಿಡಬಹುದು.
ಬಳಕೆ ಸರಳ, ಸುರಕ್ಷತೆ ಬಹಳ
ಗೂಗಲ್ ಪ್ಲೇ ಸ್ಟೋರ್ ಅಥವಾ ಆಯಪಲ್ ಆಯಪ್ ಸ್ಟೋರ್‌ನಿಂದ 'Aadhaar' ಆಯಪ್ ಡೌನ್‌ಲೋಡ್ ಮಾಡಿ. ಬಳಿಕ ತಮ್ಮ ಆಧಾರ್ ಸಂಖ್ಯೆ ಹಾಗೂ ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಓಟಿಪಿ ಮೂಲಕ ದೃಢೀಕರಣ ಮಾಡಬೇಕು. ಅದರ ನಂತರ ಫೇಸ್ ರೆಕಗ್ನಿಶನ್, ಪಿನ್ ಸೆಟ್ ಮಾಡಿದರೆ ಆಯಪ್ ಬಳಕೆಗೆ ಸಿದ್ಧವಾಗುತ್ತದೆ. ಹಾಗೆಂದು ಈ ಆಯಪ್‌ನಲ್ಲಿ ಹೆಸರು ಜನ್ಮದಿನಾಂಕ ಬದಲಾವಣೆ, ತಿದ್ದುಪಡಿ ಇತ್ಯಾದಿ ಸೌಲಭ್ಯಗಳಿಲ್ಲ. ಮೊಬೈಲ್ ನಂಬರ್ ಅಪ್‌ಡೇಟ್ ಮಾಡಲೂ ಸಾಧ್ಯವಿಲ್ಲ. ಅದಕ್ಕೆ ಆಧಾರ್ ಎನ್‌ರೋಲ್ ಸೆಂಟರ್‌ಗೇ ಹೋಗಬೇಕು. ವಿಳಾಸ ಬದಲಾವಣೆಯನ್ನಷ್ಟೇ ಮಾಡಬಹುದು.




