HEALTH TIPS

ಸದನದಲ್ಲಿ 'ವಂದೇಮಾತರಂ', 'ಜೈ ಹಿಂದ್‌' ಘೋಷಣೆ ಬೇಡ: ರಾಜ್ಯಸಭಾ ಸಚಿವಾಲಯ ಪ್ರಕಟಣೆ

ನವದೆಹಲಿ: ಸಂಸದೀಯ ಶಿಷ್ಟಾಚಾರವನ್ನು ಕಾಪಾಡುವ ನಿಟ್ಟಿನಲ್ಲಿ ಸಂಸದರು ಸದನದ ಒಳಗೆ ಹಾಗೂ ಹೊರಭಾಗದಲ್ಲಿ 'ವಂದೇ ಮಾತರಂ' ಹಾಗೂ 'ಜೈ ಹಿಂದ್‌' ಘೋಷಣೆಗಳನ್ನು ಕೂಗುವಂತಿಲ್ಲ ಎಂದು ರಾಜ್ಯಸಭಾ ಸಚಿವಾಲಯವು ನೆನಪಿಸಿದೆ. ಈ ನಿರ್ಧಾರದ ಬೆನ್ನಲ್ಲೇ, ಬಿಜೆಪಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್‌, 'ದೇಶದ ಸ್ವಾತಂತ್ರ್ಯ ಚಳವಳಿಗೆ ಏನನ್ನೂ ನೀಡದವರಿಗೆ ಈ ಘೋಷಣೆಯಿಂದ ಸಮಸ್ಯೆಯಾಗಿದೆ' ಎಂದು ಪ್ರತಿಕ್ರಿಯಿಸಿದೆ.

ಡಿಸೆಂಬರ್‌ 1ರಂದು ಸಂಸತ್ತಿನ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನ ರಾಜ್ಯಸಭಾ ಸಂಸದರಿಗೆ ನೀಡಲಾದ ಕೈಪಿಡಿಯಲ್ಲಿ ಈ ಸೂಚನೆಗಳನ್ನು ನೀಡಲಾಗಿದೆ.

ಸದನದ ಘನತೆ ಕಾಪಾಡುವ ನಿಟ್ಟಿನಲ್ಲಿ ಸದಸ್ಯರು ತಮ್ಮ ಭಾಷಣಗಳನ್ನು 'ಧನ್ಯವಾದಗಳು', 'ಜೈ ಹಿಂದ್‌' ಹಾಗೂ 'ವಂದೇ ಮಾತರಂ' ಘೋಷಣೆಗಳೊಂದಿಗೆ ಮುಕ್ತಾಯಗೊಳಿಸಬಾರದು ಎಂದು ರಾಜ್ಯಸಭೆ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ನಿರ್ಧಾರಕ್ಕೆ ವಿಡಿಯೊ ಸಂದೇಶದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌, 'ನನಗೆ ನಿಜಕ್ಕೂ ಆಘಾತವಾಗಿದೆ. ಈ ಘೋಷಣೆಳನ್ನು ಕೂಗಲು ಆಕ್ಷೇಪಣೆಯಾದರೂ ಏಕೆ? ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ ಬಳಸಲಾಗುತ್ತಿದ್ದ ಘೋಷಣೆಗಳ ಕುರಿತು ಬ್ರಿಟಿಷರಿಗೆ ಸಮಸ್ಯೆಗಳಿದ್ದವು. ಈಗ ಬಿಜೆಪಿಗೂ ಸಮಸ್ಯೆ ಉಂಟಾಗಿದೆ' ಎಂದು ತಿಳಿಸಿದ್ದಾರೆ.

'ಜೈ ಹಿಂದ್‌' ಎಂದರೆ ಹಿಂದೂಸ್ತಾನದ ಗೆಲುವು ಎಂದರ್ಥ. ಭಾರತವು ಸದಾ ಗೆಲುವು ಪಡೆಯಬೇಕು. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿಯೂ ಅದು ಅತ್ಯಂತ ಪ್ರಬಲವಾದ ಘೋಷಣೆಯಾಗಿತ್ತು. ಈ ಘೋಷಣೆಯು ಪ್ರತಿ ಭಾರತೀಯನ ಹೃದಯದ ಬಡಿತ ಹೆಚ್ಚಿಸುತ್ತದೆ' ಎಂದು ತಿಳಿಸಿದ್ದಾರೆ.

ರಾಜ್ಯಸಭಾ ಸಚಿವಾಲಯದ ಮೂಲಗಳ ಪ್ರಕಾರ, 'ಇಂತಹ ಅಧಿಸೂಚನೆಯನ್ನು ಇದೇ ಮೊದಲ ಬಾರಿಗೆ ಹೊರಡಿಸಿಲ್ಲ. 2005ರಲ್ಲಿ ಯುಪಿಎ ನೇತೃತ್ವದ ಸರ್ಕಾರದ ಅವಧಿಯಲ್ಲೂ ಕೂಡ ಇದೇ ಮಾದರಿಯ ಅಧಿಸೂಚನೆಯನ್ನು ಹೊರಡಿಸಲಾಗಿತ್ತು' ಎಂದು ತಿಳಿಸಿದೆ.

 ಸುಪ್ರಿಯಾ ಶ್ರೀನೇತ್‌

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries