ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ, ತಮಿಳುನಾಡಿನಲ್ಲಿ ಎಸ್‌ಐರ್ ನಡೆಸುವ ಚುನಾವಣಾ ಆಯೋಗದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ.
ಬಿಹಾರ ಎಸ್‌ಐಆರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇನ್ನೂ ತನ್ನ ತೀರ್ಪನ್ನು ನೀಡದ ಕಾರಣ, ಈ ಪ್ರಕ್ರಿಯೆ ಪ್ರಜಾಪ್ರಭುತ್ವ ವಿರೋಧಿ ಮತ್ತು ತಮಿಳುನಾಡಿನ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಸಭೆಯಲ್ಲಿ ಆರೋಪಿಸಲಾಗಿದೆ.
"SIR ಸ್ವೀಕಾರಾರ್ಹವಲ್ಲ, ಮತ್ತು ಸರ್ವಪಕ್ಷ ಸಭೆಯು ಚುನಾವಣಾ ಆಯೋಗವನ್ನು ಈ ಪ್ರಕ್ರಿಯೆಯನ್ನು ಕೈಬಿಡುವಂತೆ ಒತ್ತಾಯಿಸುತ್ತದೆ. ನ್ಯೂನತೆಗಳನ್ನು ನಿವಾರಿಸಿದ ನಂತರವೇ ಇದನ್ನು ನಡೆಸಬೇಕು. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮತ್ತು ರಾಜ್ಯದಲ್ಲಿ 2026ರ ವಿಧಾನಸಭಾ ಚುನಾವಣೆಯ ನಂತರ ಸಾಕಷ್ಟು ಸಮಯದೊಂದಿಗೆ ಪಾರದರ್ಶಕ ರೀತಿಯಲ್ಲಿ ಇದನ್ನು ನಡೆಸಬೇಕು" ಎಂದು ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯದಲ್ಲಿ ಹೇಳಲಾಗಿದೆ.
ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ಸಭೆಯನ್ನು ಬಹಿಷ್ಕರಿಸಿತ್ತು. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ), ಡಾ.ರಾಮದಾಸ್ ನೇತೃತ್ವದ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಸಭೆಯಿಂದ ದೂರ ಉಳಿದಿತ್ತು.




