ಸಿಡ್ನಿ,: `ಸಾಮಾಜಿಕ ಮಾಧ್ಯಮ ಕನಿಷ್ಠ ವರ್ಷ ಕಾಯ್ದೆಯಡಿ' ಆನ್‍ಲೈನ್ ಸುರಕ್ಷತೆಯನ್ನು ಹೆಚ್ಚಿಸಲು ಹದಿನಾರು ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಲಾಗಿದ್ದು ಇದು ಈ ವರ್ಷದ ಡಿಸೆಂಬರ್ 10ರಿಂದ ಜಾರಿಗೆ ಬರಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಅಲ್ಬಾನೆಸ್ ಘೋಷಿಸಿದ್ದಾರೆ.
ಇದರ ಪ್ರಕಾರ, 16 ವರ್ಷದೊಳಗಿನ ಅಪ್ರಾಪ್ತ ವಯಸ್ಕರು ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ಟಿಕ್‍ಟಾಕ್, ಸ್ನ್ಯಾಪ್‍ಚಾಟ್, ಎಕ್ಸ್, ಯೂಟ್ಯೂಬ್, ರೆಡಿಟ್, ಕಿಕ್ ಮುಂತಾದ ಸಾಮಾಜಿಕ ವೇದಿಕೆಗಳಲ್ಲಿ ಖಾತೆಗಳನ್ನು ರಚಿಸುವುದು ಅಥವಾ ನಿರ್ವಹಿಸುವುದನ್ನು ನಿಷೇಧಿಸಲಾಗಿದೆ. ಸೈಬರ್ ಬೆದರಿಕೆ, ಹಾನಿಕಾರಕ ವಿಷಯ ಮತ್ತು ಸಾಮಾಜಿಕ ಮಾಧ್ಯಮದ ವ್ಯಸನ ಇತ್ಯಾದಿ ಆನ್‍ಲೈನ್ ಅಪಾಯಗಳಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಈ ಕಾನೂನು ಜಾರಿಗೊಳಿಸಿರುವುದಾಗಿ ಸರಕಾರ ಹೇಳಿದೆ.




