ವಾಷಿಂಗ್ಟನ್: ಅಮೆರಿಕಾ ಸಂಸತ್ತಿನಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಸಂಸದರು ಒಪ್ಪಂದವೊಂದಕ್ಕೆ ಬಂದಿದ್ದು ಇದು ಫೆಡರಲ್ ಅನುದಾನವನ್ನು ಮುಂದುವರಿಸಿ ಸರಕಾರದ `ಶಟ್‍ಡೌನ್' ಅನ್ನು ಕೊನೆಗೊಳಿಸುವ ನಿರೀಕ್ಷೆಯಿದೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.
ಜನವರಿ ವರೆಗೆ ಸರಕಾರಕ್ಕೆ ಫೆಡರಲ್ ಅನುದಾನ ಒದಗಿಸುವ ತಾತ್ಕಾಲಿಕ ಒಪ್ಪಂದಕ್ಕೆ ಸಂಸದರು ಸಮ್ಮತಿಸಿದ್ದಾರೆ ಎಂದು ಸಿಎನ್‍ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇದೇ ಸಂದರ್ಭ ಶ್ವೇತಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಶಟ್‍ಡೌನ್ ಕೊನೆಗೊಳಿಸುವತ್ತ ನಾವು ಹತ್ತಿರವಾಗುತ್ತಿರುವಂತೆ ಕಾಣುತ್ತದೆ' ಎಂದು ಹೇಳಿದರು.
`ಮುಂದುವರಿಸುವ ಸಂಕಲ್ಪ' ಎಂದು ಹೆಸರಿಸಿದ ಮಸೂದೆಯು ಸರಕಾರದ ಅನುದಾನವನ್ನು ಮುಂದುವರಿಸಲು, ಫೆಡರಲ್ ಸಿಬ್ಬಂದಿಗಳನ್ನು ಆಧಾರರಹಿತ ವಜಾಗಳಿಂದ ರಕ್ಷಿಸಲು, ಸ್ಥಗಿತದ ಸಮಯದಲ್ಲಿ ತಪ್ಪಾಗಿ ವಜಾಗೊಳಿಸಲ್ಪಟ್ಟವರನ್ನು ಮರು ನೇಮಿಸಲು ಮತ್ತು ಫೆಡರಲ್ ಸಿಬ್ಬಂದಿಗಳು ವೇತನಗಳನ್ನು ಪಡೆಯುವುದನ್ನು ಖಾತರಿಗೊಳಿಸುತ್ತದೆ. ಈ ಮಸೂದೆಯು `ಹಸಿವೆ ತಡೆಯುವ ಕಾರ್ಯಕ್ರಮ'ದಡಿ ಕಡಿಮೆ ಆದಾಯದ 42 ದಶಲಕ್ಷ ಅಮೆರಿಕನ್ನರು ದಿನಸಿಗಳಿಗೆ ಪಾವತಿಸಲು ನೆರವಾಗುತ್ತದೆ. ಕಳೆದ ತಿಂಗಳು ಟ್ರಂಪ್ ವಜಾಗೊಳಿಸಿದ ಸಾವಿರಾರು ಫೆಡರಲ್ ಕಾರ್ಮಿಕರ ಮರು ನೇಮಕಕ್ಕೆ ದಾರಿ ಮಾಡಿಕೊಡಲಿದೆ ಎಂದು ಡೆಮಾಕ್ರಟಿಕ್ ಸದಸ್ಯ ಟಿಮ್ ಕೆಯ್ನ್ ಹೇಳಿದ್ದಾರೆ.




