HEALTH TIPS

ಕಾಂಗ್ರೆಸ್‌ ತಪ್ಪಿನಿಂದ ಕಾಶ್ಮೀರ ವಿಭಜನೆ: ಮೋದಿ

ಏಕತಾ ನಗರ :'ಸಂಪೂರ್ಣ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಬಯಸಿದ್ದರು, ಆದರೆ, ನೆಹರೂ ಅವರು ಇದಕ್ಕೆ ಅವಕಾಶ ಕೊಡಲಿಲ್ಲ' ಎಂದು ಪ್ರಧಾನಿ ಮೋದಿ ಶುಕ್ರವಾರ ಇಲ್ಲಿ ಹೇಳಿದರು.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 150ನೇ ಜಯಂತಿ ಅಂಗವಾಗಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಇತಿಹಾಸ ಬರೆಯಲು ನಾವು ಸಮಯ ವ್ಯರ್ಥ ಮಾಡಬಾರದು, ಬದಲಿಗೆ ಇತಿಹಾಸ ನಿರ್ಮಿಸಲು ಶ್ರಮಿಸಬೇಕು' ಎನ್ನವುದರಲ್ಲಿ ಸರ್ದಾರ್‌ ಪಟೇಲ್‌ ನಂಬಿಕೆ ಇರಿಸಿದ್ದರು. ಅವರು ರೂಪಿಸಿದ ನೀತಿ, ನಿರ್ಣಯಗಳು, ತೆಗೆದುಕೊಂಡ ದೃಢ ನಿರ್ಧಾರಗಳು ಹೊಸ ಇತಿಹಾಸವನ್ನು ನಿರ್ಮಿಸಿದವು. 'ಒಂದೇ ಭಾರತ; ಶ್ರೇಷ್ಠ ಭಾರತ'ದ ಕಲ್ಪನೆಯು ಅವರ ಪಾಲಿಗೆ ಸರ್ವಶ್ರೇಷ್ಠವಾಗಿತ್ತು' ಎಂದು ಪ್ರಧಾನಿ ಹೇಳಿದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, 'ಕಾಂಗ್ರೆಸ್‌ ಮಾಡಿದ ತಪ್ಪಿಗೆ ದೇಶವು ದಶಕಗಳ ಕಾಲ ನೋವು ಅನುಭವಿಸಬೇಕಾಯಿತು. ಕಾಂಗ್ರೆಸ್‌ನ ದುರ್ಬಲ ನೀತಿಯಿಂದಲೇ ಕಾಶ್ಮೀರವು ಪಾಕಿಸ್ತಾನದ ಆಕ್ರಮಣಕ್ಕೆ ಒಳಗಾಯಿತು. ನಂತರ ಅಲ್ಲಿ ಪಾಕ್‌ ಪ್ರಾಯೋಜಿತ ಭಯೋತ್ಪಾದನೆ ಆರಂಭವಾಯಿತು. ಕಾಶ್ಮೀರ ವಿಷಯದಲ್ಲಿ ಮಾಡಿದ ತಪ್ಪುಗಳು, ಈಶಾನ್ಯ ರಾಜ್ಯಗಳಲ್ಲಿ ಉದ್ಭವಿಸಿರುವ ಸಮಸ್ಯೆಗಳು ಮತ್ತು ದೇಶದಾದ್ಯಂತ ವ್ಯಾಪಿಸಿದ ನಕ್ಸಲ್‌-ಮಾವೊವಾದಿ ಭಯೋತ್ಪಾದನೆಯು ದೇಶದ ಸಾರ್ವಭೌಮತೆಗೆ ಸವಾಲಾಗಿವೆ' ಎಂದರು.

ದೇಶದಲ್ಲಿ ರಾಜಕೀಯ ಅಸ್ಪೃಶ್ಯತೆಯನ್ನು ಒಂದು ಸಂಸ್ಕೃತಿಯನ್ನಾಗಿ ಮಾಡಲಾಯಿತು. ಸರ್ದಾರ್ ಪಟೇಲ್‌ ವಿಷಯದಲ್ಲಿ ಕಾಂಗ್ರೆಸ್‌ ಏನು ಮಾಡಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಂಬೇಡ್ಕರ್‌, ಸುಭಾಷ್‌ ಚಂದ್ರಬೋಸ್‌, ಲೋಹಿಯಾ, ಜಯಪ್ರಕಾಶ್‌ ನಾರಾಯಣ್‌ ಅವರ ವಿಷಯದಲ್ಲೂ ಕಾಂಗ್ರೆಸ್‌ ಏನು ಮಾಡಿದೆ ಎಂದು ಮೋದಿ ಪ್ರಶ್ನಿಸಿದರು. ಆರ್‌ಎಸ್‌ಎಸ್‌ ಕೂಡ ಇಂತಹ ಪಿತೂರಿ ಮತ್ತು ದಾಳಿಗೆ ತುತ್ತಾಯಿತು ಎಂದು ಅವರು ಹೇಳಿದರು.

'ಕಾಂಗ್ರೆಸ್‌ಗೆ 'ಗುಲಾಮ ಮನಸ್ಥಿತಿ' ಬ್ರಿಟಿಷರಿಂದ ಆನುವಂಶಿಕವಾಗಿ ಬಂದಿದೆ. ಈ ವಸಾಹತುಶಾಹಿ ಮನಸ್ಥಿತಿಯ ಎಲ್ಲ ಕುರುಹುಗಳನ್ನು ದೇಶ ಅಳಿಸಿ ಹಾಕಲಿದೆ' ಎಂದರು.

'ಸರ್ದಾರ್‌ ಪಟೇಲ್‌ ಭಾರತ'

370ನೇ ವಿಧಿಯ ಸಂಕೋಲೆಗಳನ್ನು ಮುರಿದು ಕಾಶ್ಮೀರವನ್ನು ಮುಖ್ಯ ವಾಹಿನಿಗೆ ಸಂಪುರ್ಣವಾಗಿ ಸಂಯೋಜಿಸಲಾಗಿದೆ. ಈಗ ಪಾಕಿಸ್ತಾನ ಮತ್ತು ಇತರೆ ಭಯೋತ್ಪಾದಕರಿಗೆ ಭಾರತದ ನಿಜವಾದ ಶಕ್ತಿಯ ಅರಿವಿದೆ. ಯಾರಾದರೂ ಭಾರತದ ಮೇಲೆ ಕೆಟ್ಟ ದೃಷ್ಟಿ ಬೀರಿದರೆ, ನಾವು ಶತ್ರುವಿನ ಮನೆಗೇ ನುಗ್ಗಿ ಸೆದೆಬಡಿಯುತ್ತೇವೆ' ಎನ್ನುವುದಕ್ಕೆ ಆಪರೇಷನ್‌ ಸಿಂಧೂರ ಸಾಕ್ಷಿಯಾಗಿದೆ. ಇದು ಸರ್ದಾರ್‌ ಪಟೇಲ್‌ ಭಾರತ ಎಂದು ಮೋದಿ ಹೇಳಿದರು.

- ಮಲ್ಲಿಕಾರ್ಜನ ಖರ್ಗೆ ಎಐಸಿಸಿ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ ಸಾಮ್ರಾಟ ಅಲ್ಲ. ಹಲವು ರಾಜ್ಯಗಳು ಇನ್ನೂ ಅವರ ಕೈ ಕೆಳಗೆ ಬಂದಿಲ್ಲ ಅಲ್ಲಿ ವಿರೋಧ ಪಕ್ಷಗಳ ಆಡಳಿತವಿದೆ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿ370ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ಪ್ರಧಾನಿ ಮೋದಿ ಸರ್ದಾರ್‌ ವಲ್ಲಭಭಾಯಿ ಪಟೇಲರ ಅಖಂಡ ಭಾರತದ ಕನಸನ್ನು ನನಸು ಮಾಡಿದ್ದಾರೆ

ಕಾಂಗ್ರೆಸ್‌ ವಾಗ್ದಾಳಿ

ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಜಯಂತಿಯಂದು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ 'ದೇಶದ ಸ್ವಾಂತಂತ್ರ್ಯ ಚಳವಳಿ ಮತ್ತು ಸಂವಿಧಾನ ರಚನೆಯಲ್ಲಿ ಯಾವುದೇ ಪಾತ್ರ ವಹಿಸದ ಸಿದ್ಧಾಂತವೊಂದು ಮಹಾತ್ಮಗಾಂಧಿ ಅವರ ಹತ್ಯೆಗೆ ಕಾರಣವಾದ ವಾತಾವರಣವನ್ನು ಸೃಷ್ಟಿಸಿತ್ತು ಎಂದು ಪಟೇಲ್‌ ಹಿಂದೆಯೇ ಹೇಳಿದ್ದರು' ಎಂದು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರು ಶ್ಯಾಮ ಪ್ರಸಾದ್‌ ಮುಖರ್ಜಿ ಅವರಿಗೆ 1948 ಜುಲೈ 1ರಂದು ಬರೆದಿರುವ ಪತ್ರದ ಆಯ್ದ ಭಾಗಗಳನ್ನೂ ಜೈರಾಂ ರಮೇಶ್‌ ತಮ್ಮ ಪೋಸ್ಟ್‌ ಜತೆಗೆ ಪ್ರಕಟಿಸಿದ್ದಾರೆ. '2014ರ ನಂತರ ಇತಿಹಾಸವು ಲಜ್ಜೆಗೆಟ್ಟ ತಪ್ಪು ನಿರೂಪಣೆಗೆ ಒಳಗಾಗಿದೆ' ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries