ನಾಗ್ಪುರ: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳಿಗೆ ವಿವಿಪ್ಯಾಟ್ ಯಂತ್ರಗಳು ಕಡ್ಡಾಯವಲ್ಲ ಹಾಗೂ ಅವು ತಾಂತ್ರಿಕವಾಗಿ ಕಾರ್ಯಸಾಧುವಲ್ಲ ಎಂದು ಬುಧವಾರ ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು ಬಾಂಬೆ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಮುಂಬರುವ ಮಹಾರಾಷ್ಟ್ರ ಚುನಾವಣೆಯಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ಬಳಸದಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ನ ನಾಗ್ಪುರ್ ನ್ಯಾಯಪೀಠದೆದುರು ಕಾಂಗ್ರೆಸ್ ನಾಯಕ ಪ್ರಫುಲ್ಲ ಗುಡಾಢೆ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಚುನಾವಣಾ ಆಯೋಗ ಈ ಪ್ರಮಾಣ ಪತ್ರವನ್ನು ಸಲ್ಲಿಸಿದೆ.
ಪಾರದರ್ಶಕ ಚುನಾವಣಾ ಪ್ರಕ್ರಿಯೆಗೆ ವಿವಿಪ್ಯಾಟ್ ವ್ಯವಸ್ಥೆ ಅತ್ಯಗತ್ಯವಾಗಿದೆ ಎಂದು ಪ್ರಫುಲ್ಲ ಗುಡಾಢೆ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ಈ ಸಂಬಂಧ ಬುಧವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ಚುನಾವಣಾ ಪ್ರಕ್ರಿಯೆಯಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ಬಳಸುವುದು ಕಡ್ಡಾಯವೆಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿರುವಾಗ, ವಿವಿಪ್ಯಾಟ್ ಯಂತ್ರಗಳನ್ನು ಯಾಕೆ ಬಳಸಲು ಸಾಧ್ಯವಿಲ್ಲ ಎಂಬ ಕಾರಣ ನೀಡುವಂತೆ ಚುನಾವಣಾ ಆಯೋಗಕ್ಕೆ ನ್ಯಾ. ಅನಿಲ್ ಕಿಲೋರ್ ನೇತೃತ್ವದ ನ್ಯಾಯಪೀಠ ಸೂಚಿಸಿತು.
ಈ ವೇಳೆ, ಸುಪ್ರೀಂ ಕೋರ್ಟ್ ತೀರ್ಪು ಕೇವಲ ಸಾರ್ವತ್ರಿಕ ಚುನಾವಣೆಗಳಿಗೆ ಅನ್ವಯವಾಗುತ್ತದೆಯೇ ಹೊರತು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗಲ್ಲ ಎಂದು ಚುನಾವಣಾ ಆಯೋಗದ ಪರ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ಪ್ರತಿ ವಾದ ಮಂಡಿಸಿದರು. 2017ರ ನಗರ ಪಾಲಿಕೆ ಚುನಾವಣೆಗಳಲ್ಲೂ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗಿರಲಿಲ್ಲ ಎಂಬುದತ್ತ ಅವರು ಬೊಟ್ಟು ಮಾಡಿದರು.
ಬಳಿಕ, ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.




