ತನ್ನ ಕಕ್ಷಿದಾರರು ಐದು ವರ್ಷಗಳಿಂದಲೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದು ಜಗತಾಪ್ ಪರ ಹಿರಿಯ ನ್ಯಾಯವಾದಿ ಅಪರ್ಣಾ ಭಟ್ ತಿಳಿಸಿದ ಬಳಿಕ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ ಮತ್ತು ಸತೀಶಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಜಾಮೀನು ಆದೇಶವನ್ನು ಹೊರಡಿಸಿತು.
ಈ ಹಿಂದೆ ಮುಂಬೈ ಉಚ್ಚ ನ್ಯಾಯಾಲಯವು,ಜಗತಾಪ್ 2017, ಜ.31ರಂದು ಪುಣೆಯಲ್ಲಿ ನಡೆದಿದ್ದ ಎಲ್ಗಾರ್ ಪರಿಷದ್ ನ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಪ್ರದರ್ಶನದ ಸಮಯ ಆಕ್ರಮಣಕಾರಿ ಮತ್ತು ಅತ್ಯಂತ ಪ್ರಚೋದನಾಕಾರಿ ಎಂದು ಹೇಳಲಾದ ಘೋಷಣೆಗಳನ್ನು ಕೂಗಿದ್ದ ಕಬೀರ್ ಕಲಾ ಮಂಚ್ ನ (ಕೆಕೆಎಂ)ಸಕ್ರಿಯ ಸದಸ್ಯೆಯಾಗಿದ್ದಾರೆ ಎಂದು ಎತ್ತಿ ಹಿಡಿದಿತ್ತು.
ಕೆಕೆಎಂ ಸಿಪಿಐ (ಮಾವೋವಾದಿ) ನಿಯಂತ್ರಣದಲ್ಲಿರುವ ಸಂಘಟನೆಯಾಗಿದೆ ಎಂದು ಎನ್‌ಐಎ ಪ್ರತಿಪಾದಿಸಿದೆ.
ತನಗೆ ಜಾಮೀನು ನಿರಾಕರಿಸಿದ್ದ ವಿಶೇಷ ನ್ಯಾಯಾಲಯದ ಫೆಬ್ರವರಿ 2022ರ ಆದೇಶವನ್ನು ಪ್ರಶ್ನಿಸಿ ಜಗತಾಪ್ ಸಲ್ಲಿಸಿದ್ದ ಮೇಲ್ಮನವಿಯನ್ನು ಉಚ್ಚ ನ್ಯಾಯಾಲಯವು ವಜಾಗೊಳಿಸಿತ್ತು.
ಜಗತಾಪ್ ಅವರನ್ನು ಸೆಪ್ಟಂಬರ್ 2020ರಲ್ಲಿ ಬಂಧಿಸಲಾಗಿತ್ತು.
ಎಲ್ಗಾರ್ ಪರಿಷದ್ ನ ಕಾರ್ಯಕ್ರಮದಲ್ಲಿ ಮಾಡಲಾಗಿದ್ದ ಪ್ರಚೋದನಾಕಾರಿ ಭಾಷಣಗಳು 2018,ಜ.1ರಂದು ಪುಣೆ ಹೊರವಲಯದ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ಹಿಂಸಾಚಾರ ಭುಗಿಲೇಳಲು ಕಾರಣವಾಗಿದ್ದವು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.




