ನ.10ರಂದು ದಿಲ್ಲಿಯ ಕೆಂಪು ಕೋಟೆ ಬಳಿ ಸಂಭವಿಸಿದ್ದ ಸ್ಫೋಟದ ತನಿಖೆಯ ಅಂಗವಾಗಿ ಮಂಗಳವಾರ ದಿನವಿಡೀ ಅಲ್ ಫಲಾಹ್ ಸಮೂಹಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದ ಬಳಿಕ ಸಿದ್ದೀಕಿ ಅವರನ್ನು ಈಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬುಧವಾರ ನಸುಕಿನ ಒಂದು ಗಂಟೆಯ ಸುಮಾರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶೀತಲ ಚೌಧರಿ ಪ್ರಧಾನ ಅವರ ನಿವಾಸದಲ್ಲಿ ಸಿದ್ದೀಕಿಯವರನ್ನು ಹಾಜರು ಪಡಿಸಲಾಗಿತ್ತು.
ಸಿದ್ದೀಕಿ ಗಮನಾರ್ಹ ಆರ್ಥಿಕ ಸಂಪನ್ಮೂಲಗಳು ಹಾಗೂ ಪ್ರಭಾವವನ್ನು ಹೊಂದಿದ್ದಾರೆ ಮತ್ತು ಕೊಲ್ಲಿಯಲ್ಲಿ ಅವರ ಕುಟುಂಬದ ಉಪಸ್ಥಿತಿಯಿಂದಾಗಿ ಅವರು ದೇಶದಿಂದ ಪಲಾಯನ ಮಾಡುವ ಸ್ಪಷ್ಟ ಸಾಧ್ಯತೆಗಳಿವೆ ಎಂದು ಈಡಿ ತನ್ನ ಕಸ್ಟಡಿ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಸಿದ್ದೀಕಿ ಮತ್ತು ಅವರ ನಿರ್ದೇಶನದಡಿ ಅಲ್ ಫಲಾಹ್ ಚ್ಯಾರಿಟೇಬಲ್ ಟ್ರಸ್ಟ್ ನ್ಯಾಕ್ ಮತ್ತು ಯುಜಿಸಿ ಮಾನ್ಯತೆ ಹೊಂದಿರುವುದಾಗಿ ಸುಳ್ಳು ಹೇಳಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ದಾರಿ ತಪ್ಪಿಸುವ ಮೂಲಕ 415.10 ಕೋಟಿ ರೂ.ಗಳನ್ನು ಅಪ್ರಾಮಾಣಿಕವಾಗಿ ಗಳಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿರುವ ಈಡಿ, ಆರೋಪಿ ಗಂಭೀರ ಆರ್ಥಿಕ ಅಪರಾಧಗಳ ಇತಿಹಾಸವನ್ನು ಹೊಂದಿದ್ದಾರೆ. ಪ್ರಸ್ತುತ ಆರೋಪಗಳ ಗಂಭೀರತೆ ಮತ್ತು ಅಕ್ರಮ ಹಣ ವರ್ಗಾವಣ ತಡೆ ಕಾಯ್ದೆಯಡಿ(ಪಿಎಮ್ ಎಲ್‌ಎ) ಅಡಿ ಸಂಭಾವ್ಯ ಪರಿಣಾಮಗಳನ್ನು ಪರಿಗಣಿಸಿದರೆ ಅವರನ್ನು ಬಂಧಿಸದಿದ್ದರೆ ಅವರು ತಲೆಮರೆಸಿಕೊಳ್ಳಬಹುದು,ಆಸ್ತಿಗಳನ್ನು ಪರಭಾರೆ ಮಾಡಬಹುದು ಅಥವಾ ತನಿಖೆಗೆ ಅಡ್ಡಿಯನ್ನುಂಟು ಮಾಡಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದೆ.
ಅಲ್ ಫಲಾಹ್ ವಿವಿಯು ವಿದ್ಯಾರ್ಥಿಗಳನ್ನು ಸೆಳೆಯಲು ನಕಲಿ ಮಾನ್ಯತೆ ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ ದಿಲ್ಲಿ ಪೋಲಿಸ್ ನ ಕ್ರೈಂ ಬ್ರ್ಯಾಂಚ್ ದಾಖಲಿಸಿರುವ ಎರಡು ಎಫ್‌ಐಆರ್ ಗಳನ್ನು ಈಡಿ ಉಲ್ಲೇಖಿಸಿದೆ.
ಟ್ರಸ್ಟ್ ವಂಚನೆಯ ಮೂಲಕ ಶುಲ್ಕಗಳ ರೂಪದಲ್ಲಿ 400 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಸಂಗ್ರಹಿಸಿದೆ ಮತ್ತು ಸಿದ್ದೀಕಿ ಈ ಹಣವನ್ನು ತನ್ನ ವೈಯಕ್ತಿಕ ಹಾಗೂ ಖಾಸಗಿ ಹಿತಾಸಕ್ತಿಗಳಿಗೆ ಬಳಸಿಕೊಂಡಿದ್ದಾರೆ ಎಂದು ಈಡಿ ಪ್ರತಿಪಾದಿಸಿದೆ.
ಸಿದ್ದೀಕಿ ಪ್ರವೇಶ ದಾಖಲೆಗಳು, ಲೆಕ್ಕಪತ್ರಗಳು, ಶುಲ್ಕಗಳ ಲೆಡ್ಜರ್ ಮತ್ತು ಐಟಿ ವ್ಯವಸ್ಥೆಗಳನ್ನು ನಿರ್ವಹಿಸುವ ಸಿಬ್ಬಂದಿಗಳ ಮೇಲೆ ನಿಯಂತ್ರಣ ಹೊಂದಿದ್ದು, ಇದು ಅವರಿಗೆ ದಾಖಲೆಗಳನ್ನ ನಾಶಮಾಡುವ ಅಥವಾ ಬದಲಾಯಿಸುವ ಅವಕಾಶವನ್ನು ಒದಗಿಸಿತ್ತು ಎಂದು ಹೇಳಿರುವ ಈಡಿ ಹಲವಾರು ಬ್ಯಾಂಕ್ ಖಾತೆಗಳಲ್ಲಿಯ ಹಣದ ಜಾಡನ್ನು ಇನ್ನಷ್ಟೇ ಕಂಡುಕೊಳ್ಳಬೇಕಿದೆ ಹಾಗೂ ಬೇನಾಮಿ ಠೇವಣಿಗಳು ಮತ್ತು ಬ್ಯಾಲೆನ್ಸ್ಶೀಟ್ನಲ್ಲಿ ಇಲ್ಲದ ಆಸ್ತಿಗಳನ್ನು ಪತ್ತೆ ಹಚ್ಚಬೇಕಿದೆ. ಇಡೀ ಅಲ್ ಫಲಾಹ್ ಶೈಕ್ಷಣಿಕ ಪರಿಸರ ವ್ಯವಸ್ಥೆಯನ್ನು ಸಿದ್ದೀಕಿ ನಿಯಂತ್ರಿಸುತ್ತಿದ್ದರು ಮತ್ತು ಅಪರಾಧದ ಆದಾಯದ 415.10 ಕೋಟಿ ರೂ.ಗಳ ಒಂದು ಭಾಗವನ್ನಷ್ಟೇ ಈವರೆಗೆ ಗುರುತಿಸಲಾಗಿದೆ ಎಂದು ತಿಳಿಸಿದೆ.
ಸಿದ್ದೀಕಿಯವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಮತ್ತು ದಿಲ್ಲಿ ಪೋಲಿಸರ ಎಫ್‌ಐಆರ್ ಗಳು ಕಪೋಲಕಲ್ಪಿತ ಆರೋಪಗಳನ್ನು ಆಧರಿಸಿವೆ ಎಂದು ಸಿದ್ದೀಕಿ ಪರ ವಕೀಲರು ವಾದಿಸಿದರು. ಆದಾಗ್ಯೂ,ತನಿಖೆಯು ಇನ್ನೂ ಆರಂಭಿಕ ಹಂತದಲ್ಲಿದೆ ಮತ್ತು ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂದು ಹೇಳಿದ ನ್ಯಾಯಾಲಯವು ಈಡಿ ಕಸ್ಟಡಿಗೆ ಒಪ್ಪಿಸಿದ್ದನ್ನು ಸಮರ್ಥಿಸಿಕೊಂಡಿದೆ.




