HEALTH TIPS

"ಮಕ್ಕಳನ್ನು ಗ್ಯಾಸ್ ಚೇಂಬರ್‌ಗೆ ತಳ್ಳುತ್ತಿದ್ದೀರಿ": ಮಾಲಿನ್ಯದ ನಡುವೆ ಕ್ರೀಡಾ ಚಟುವಟಿಕೆಗಳ ಕುರಿತು ಸುಪ್ರೀಂಕೋರ್ಟ್ ಅಸಮಾಧಾನ

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಬುಧವಾರ ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಮಾಲಿನ್ಯ ಸುರಕ್ಷಿತ ತಿಂಗಳುಗಳಿಗೆ ಬದಲಿಸಲು ನಿರ್ದೇಶನಗಳನ್ನು ಹೊರಡಿಸುವಂತೆ ವಾಯು ಗುಣಮಟ್ಟ ನಿರ್ವಹಣೆ ಆಯೋಗಕ್ಕೆ (ಸಿಎಕ್ಯೂಎಂ) ಸೂಚಿಸಿದೆ.

ವಾಯುಮಾಲಿನ್ಯ ಮಟ್ಟವು ಉತ್ತುಂಗದಲ್ಲಿರುವ ನವಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸುವುದು ಶಾಲಾ ಮಕ್ಕಳನ್ನು ಗ್ಯಾಸ್ ಚೇಂಬರ್‌ಗೆ ತಳ್ಳುವುದಕ್ಕೆ ಸಮನಾಗಿದೆ ಎಂದು ನ್ಯಾಯಾಲಯವು ಆಕ್ರೋಶ ವ್ಯಕ್ತಪಡಿಸಿದೆ.

ದಿಲ್ಲಿ ಸರಕಾರವು ವಾಯುಮಾಲಿನ್ಯವು ತಾರಕಕ್ಕೇರುವ ಈ ಎರಡು ತಿಂಗಳುಗಳಲ್ಲಿ 16 ವರ್ಷದೊಳಗಿನ ಮತ್ತು 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಅಂತರ ವಲಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದೆ ಎಂದು ಅಮಿಕಸ್ ಕ್ಯೂರೆ ಅಪರಾಜಿತಾ ಸಿಂಗ್ ಅವರು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾ.ಕೆ.ವಿನೋದ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ಹೊರಡಿಸಿತು.

ಮಕ್ಕಳು ಹೆಚ್ಚು ದುರ್ಬಲರಾಗಿದ್ದು,ವಾಯುಮಾಲಿನ್ಯ ಗರಿಷ್ಠವಾಗಿರುವ ಸಮಯದಲ್ಲಿ ಹೊರಾಂಗಣ ಕ್ರೀಡಾ ಚಟುವಟಿಕೆಗಳನ್ನು ನಡೆಸುವುದು ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಸಿಂಗ್ ಹೇಳಿದರು.

ದಿಲ್ಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯವು ಇನ್ನಷ್ಟು ಹೆಚ್ಚುವುದನ್ನು ತಡೆಯಲು ಈವರೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಎರಡು ವಾರಗಳ ಹಿಂದೆ ಸಿಎಕ್ಯೂಎಮ್‌ಗೆ ನಿರ್ದೇಶನ ನೀಡಿತ್ತು. ಅಧಿಕಾರಿಗಳು ಮುನ್ನೆಚ್ಚರಿಕೆಯನ್ನು ವಹಿಸಬೇಕು ಮತ್ತು ಮಾಲಿನ್ಯ ಮಟ್ಟವು 'ತೀವ್ರ'ಹಂತವನ್ನು ತಲುಪುವವರೆಗೆ ಕಾಯಬಾರದು ಎಂದು ನ್ಯಾಯಾಲಯವು ಆಗ ಹೇಳಿತ್ತು.

ಬದಲಾಗದ ವಾಯು ಗುಣಮಟ್ಟ ಸ್ಥಿತಿಯ ಬಗ್ಗೆ ಬುಧವಾರ ಹತಾಶೆಯನ್ನು ವ್ಯಕ್ತಪಡಿಸಿದ ಸಿಂಗ್,'ಕಳೆದ 20 ವರ್ಷಗಳಿಂದಲೂ ನಾನು ಈ ವಿಷಯವನ್ನು ನಿರ್ವಹಿಸುತ್ತಿದ್ದೇನೆ. ಹಲವಾರು ಸರಕಾರಗಳು ಬಂದಿವೆ ಮತ್ತು ಹೋಗಿವೆ,ಆದರೆ ತಳಮಟ್ಟದಲ್ಲಿ ಏನೂ ಬದಲಾಗಿಲ್ಲ' ಎಂದು ಪೀಠಕ್ಕೆ ತಿಳಿಸಿದರು.

ಆದಾಗ್ಯೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು,ವಾಯುಮಾಲಿನ್ಯವನ್ನು ನಿಯಂತ್ರಿಸಲು ಎನ್‌ಸಿಆರ್‌ನಾದ್ಯಂತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನಿರ್ಮಾಣ ಕಾಮಗಾರಿ ಧೂಳು,ವಾಹನಗಳಿಂದ ಹೊರಸೂಸುವಿಕೆ ಮತ್ತು ಇತರ ಮಾಲಿನ್ಯ ಮೂಲಗಳನ್ನು ನಿಯಂತ್ರಿಸಲು ನಿರ್ದೇಶನಗಳನ್ನು ನೀಡಲಾಗಿದೆ. ಈ ಬಗ್ಗೆ ಸಿಎಕ್ಯೂಎಂ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಹಲವಾರು ಆದೇಶಗಳನ್ನು ಹೊರಡಿಸಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ತಾತ್ವಿಕವಾಗಿ ಕ್ರಮಗಳು ಈಗಾಗಲೇ ಅಸ್ತಿತ್ವದಲ್ಲಿವೆ,ಅನುಷ್ಠಾನ ಮಾತ್ರ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries