ಅಂಕಾರ: ಟರ್ಕಿಯ ಸಂಸತ್ತಿನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ದಕ್ಷಿಣ ಏಶ್ಯಾದ ಪ್ರಾದೇಶಿಕ ಬಿಕ್ಕಟ್ಟಿನ ಬಗ್ಗೆ ಮಾತನಾಡುತ್ತಿದ್ದ ಸಂದರ್ಭ ವಿದೇಶಾಂಗ ಸಚಿವ ಹಕಾನ್ ಫಿದಾನ್ ಕಾಶ್ಮೀರದ ವಿಷಯ ಪ್ರಸ್ತಾಪಿಸಿದ್ದು ` ಮಾತುಕತೆ ಮತ್ತು ಅಂತರಾಷ್ಟ್ರೀಯ ಕಾನೂನಿನ ಆಧಾರದಲ್ಲಿ ಇದನ್ನು ಪರಿಹರಿಸಬೇಕು' ಎಂದಿದ್ದಾರೆ.
ಸಂಸತ್ತಿನ ಯೋಜನೆ ಮತ್ತು ಅನುದಾನ ಸಮಿತಿಯ ಎದುರು ಟರ್ಕಿ ವಿದೇಶಾಂಗ ಇಲಾಖೆಯ 2026ರ ಬಜೆಟ್ ಮಂಡಿಸಿದ ಬಳಿಕ ಮಾಡಿದ ಭಾಷಣದಲ್ಲಿ ಕಾಶ್ಮೀರದ ಬಗ್ಗೆ ಸಚಿವ ಫಿದಾನ್ ಅಪ್ರಸ್ತುತ ಉಲ್ಲೇಖ ಮಾಡಿದ್ದಾರೆ. ` ಈ ಪ್ರದೇಶದಲ್ಲಿನ ಬಿಕ್ಕಟ್ಟುಗಳು, ವಿಶೇಷವಾಗಿ ಕಾಶ್ಮೀರ ಬಿಕ್ಕಟ್ಟನ್ನು ಅಂತರಾಷ್ಟ್ರೀಯ ಕಾನೂನು ಮತ್ತು ಮಾತುಕತೆಯ ಮೂಲಕ ಪರಿಹರಿಸಬೇಕು ಎಂದು ನಾವು ಒತ್ತಿಹೇಳುತ್ತಿದ್ದೇವೆ. ಮೇ ತಿಂಗಳಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಉಲ್ಬಣವು ಈ ಪ್ರದೇಶದಲ್ಲಿನ ಸಂಘರ್ಷವನ್ನು ಮಾತುಕತೆಯ ಮೂಲಕ ಪರಿಹರಿಸುವ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ಜಾಹೀರು ಪಡಿಸಿದೆ' ಎಂದವರು ಪ್ರತಿಪಾದಿಸಿದ್ದಾರೆ.
ಫಿದಾನ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆ ` ಪಾಕಿಸ್ತಾನದ ಸಾರ್ವಭೌಮತ್ವವನ್ನು ಉಲ್ಲಂಘಿಸಿ ಭಾರತ ನಡೆಸಿದ್ದ ಅಪ್ರಚೋದಿತ ಆಕ್ರಮಣ ಮತ್ತು ಅಮಾಯಕ ಪ್ರಜೆಗಳ ಹತ್ಯೆಯ ವಿರುದ್ಧ ಟರ್ಕಿಯು ಪಾಕಿಸ್ತಾನದೊಂದಿಗೆ ಒಗ್ಗಟ್ಟು ಪ್ರದರ್ಶಿಸಿದೆ. ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಫಿದಾನ್ ಕಳವಳ ವ್ಯಕ್ತಪಡಿಸಿದ್ದು ನಿಕಟ ಸಮನ್ವಯದೊಂದಿಗೆ ಪರಿಸ್ಥಿತಿಯನ್ನು ಪರಾಮರ್ಶಿಸಲು ಉಭಯ ದೇಶಗಳ ಸಚಿವರೂ ಸಮ್ಮತಿಸಿದ್ದಾರೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.




