ನವದೆಹಲಿ: ದೇಶಾದ್ಯಂತ ಟೊಮೆಟೊ ಬೆಲೆಗಳು ಹಠಾತ್ತನೆ ಏರಿಕೆಯಾಗಿದ್ದು, ಇದು ಗ್ರಾಹಕರು ಕಂಗಾಲಾಗುವಂತೆ ಮಾಡಿದೆ.
ನಿನ್ನೆಯವರೆಗೂ ಸಾಮಾನ್ಯ ದರದಲ್ಲಿ ಲಭ್ಯವಿದ್ದ ಟೊಮೆಟೊ, ಈಗ ಒಮ್ಮೆಲೇ ಗಗನಕ್ಕೆ ಏರಿಕೆಯಾಗಿದೆ. ಇದು ಗ್ರಾಹಕರು ಅಚ್ಚರಿಗೊಳ್ಳುವಂತೆ ಮಾಡಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ನವೆಂಬರ್ 26 ರ ಹೊತ್ತಿಗೆ ಟೊಮೆಟೊದ ಸರಾಸರಿ ಚಿಲ್ಲರೆ ಬೆಲೆ ಕೆಜಿಗೆ 52.87 ರೂ. ಆಗಿತ್ತು. ಒಂದು ತಿಂಗಳ ಹಿಂದೆ, ಇದು 37 ರೂ. ಆಗಿತ್ತು, ಆದರೆ ಕೇವಲ 30 ದಿನಗಳಲ್ಲಿ ದರ ಶೇ. 43 ರಷ್ಟು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.
ಉತ್ಪಾದನೆ ಹೆಚ್ಚಿರುವ ದಕ್ಷಿಣ ರಾಜ್ಯಗಳಲ್ಲಿ ಟೊಮೆಟೊ ಬೆಲೆ ಸ್ವಲ್ಪಮಟ್ಟಿಗೆ ಸ್ಥಿರವಾಗಿದೆ. ತೆಲಂಗಾಣದಲ್ಲಿ ಒಂದು ಕಿಲೋ ಟೊಮೆಟೊ ಬೆಲೆ ಸುಮಾರು 31 ರೂ ಇದ್ದರೆ, ಆಂಧ್ರಪ್ರದೇಶದಲ್ಲಿ 38 ರೂ ಇದೆ. ಆದರೆ, ಉತ್ತರ ರಾಜ್ಯಗಳಲ್ಲಿ ಈ ದರ ವಿಭಿನ್ನವಾಗಿದೆ. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಕೆಜಿ ಟೊಮೆಟೋ ದರ 96 ರೂ ಇದ್ದು, ಮಿಜೋರಾಂನಲ್ಲಿ 92 ರೂ, ದೆಹಲಿಯಲ್ಲಿ, 80 ರೂ, ಮಣಿಪುರದಲ್ಲಿ, 78 ರೂ ಮತ್ತು ಸಿಕ್ಕಿಂ ರೂ. 71 ತಲುಪಿದೆ.
ಬೇಡಿಕೆ ಹೆಚ್ಚಳದೊಂದಿಗೆ ಆನ್‌ಲೈನ್ ವಿತರಣಾ ಅಪ್ಲಿಕೇಶನ್‌ಗಳಲ್ಲಿ ಬೆಲೆಗಳು ಮತ್ತಷ್ಟು ಹೆಚ್ಚಾಗಿವೆ. ದೆಹಲಿಯಲ್ಲಿ, ಬ್ಲಿಂಕಿಟ್‌ನಲ್ಲಿ ಟೊಮೆಟೊ ಕೆಜಿಗೆ 110 ರೂ ಇದ್ದರೆ, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ 96 ರೂ ಮತ್ತು ಜೆಪ್ಟೊದಲ್ಲಿ 92 ರೂ.ಗಳಿಗೆ ಏರಿದೆ.
ಇನ್ನು ಬೆಂಗಳೂರಿನಲ್ಲಿ ಪ್ರತಿ ಕೆ.ಜಿಗೆ ರೂ20ರಿಂದ ರೂ.30ರಂತೆ ಮಾರಾಟವಾಗುತ್ತಿದ್ದ ಟೊಮೆಟೊ, ಈಗ ಕೆ.ಜಿ.ಗೆ ರೂ.80ರಂತೆ ಮಾರಾಟವಾಗುತ್ತಿದೆ.
ಕೆ.ಆರ್. ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕೆ.ಜಿಗೆ ರೂ.60ಕ್ಕೆ ದರವಿದ್ದರೆ, ಇತರೆ ಪ್ರದೇಶಗಳಲ್ಲಿ ರೂ.80ರಂತೆ ಮಾರಾಟ ಮಾಡಲಾಗುತ್ತಿದೆ.
ಈ ನಡುವೆ ಜನರ ಮೇಲಿನ ಈ ಹೆಚ್ಚುವರಿ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿದ್ದು, NCCF ಕೆಲವು ಪ್ರದೇಶಗಳಲ್ಲಿ ಸಬ್ಸಿಡಿ ಬೆಲೆಯಲ್ಲಿ ಟೊಮೆಟೊಗಳನ್ನು ಒದಗಿಸಲು ಪ್ರಾರಂಭಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ NCCF ಮೂಲಕ "ಜನತಾ ಬ್ರಾಂಡ್" ಹೆಸರಿನಲ್ಲಿ ಟೊಮೆಟೊವನ್ನು ಕೆಜಿಗೆ 52 ರೂ.ಗಳಿಗೆ ಮಾರಾಟ ಮಾಡಲು ನಿರ್ಧರಿಸಿದೆ.
ಇತ್ತೀಚೆಗೆ ಬಂದ ಚಂಡಮಾರುತ "ಮೊಂತಾ" ಆಂಧ್ರಪ್ರದೇಶ ಮತ್ತು ಕರ್ನಾಟಕದ ಪ್ರಮುಖ ಟೊಮೆಟೊ ಬೆಳೆ ಪ್ರದೇಶಗಳಲ್ಲಿ ದೊಡ್ಡ ಹಾನಿ ಮಾಡಿದೆ.
ಮಳೆ, ಗಾಳಿ ಹಾಗೂ ಬೆಳೆ ಕುಸಿತದಿಂದ ಮಾರುಕಟ್ಟೆಗೆ ಆಗಮನ ಕಡಿಮೆಯಾಗಿದ್ದು,ಇದರಿಂದ ದೆಹಲಿ, ಹರಿಯಾಣ, ಉತ್ತರ ಪ್ರದೇಶ ಸೇರಿ ಅನೇಕ ರಾಜ್ಯಗಳಲ್ಲಿ ಬೆಲೆಗಳು ಏರಿಕೆಯಾಗುವಂತಾಗಿದೆ.
ಇನ್ನು ದೆಹಲಿಯಿಂದ ಪ್ರಾರಂಭವಾದ ರಿಯಾಯಿತಿ ಮಾರಾಟವನ್ನು ಶೀಘ್ರದಲ್ಲೇ ಹೆಚ್ಚಿನ ರಾಜ್ಯಗಳಲ್ಲಿ ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.




