ಉಪ್ಪಳ: ಆಹಾರ ಸೇವಿಸುತ್ತಿದ್ದಾಗ ರಕ್ತ ವಾಂತಿ ಉಂಟಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಯುವಕ ಮೃತಪಟ್ಟಿದ್ದಾರೆ. ಬಾಯಾರು ಬಳಿಯ ಚೇರಾಲ್ ರಂಬಾಯಿ ಮೂಲೆ ನಿವಾಸಿ ದಿ. ಜಯ ಎಂಬವರ ಪುತ್ರ ಕೂಲಿ ಕಾರ್ಮಿಕ ಪ್ರಶಾಂತ್ (31) ಮೃತಪಟ್ಟ ಯುವಕ. ಶುಕ್ರವಾರ ಮುಂಜಾನೆ 2 ಗಂಟೆ ವೇಳೆ ಮನೆಯಲ್ಲಿ ಆಹಾರ ಸೇವಿಸುತ್ತಿದ್ದಾಗ ವಾಂತಿ ಮಾಡಿದ್ದಾರೆ. ಅಷ್ಟರಲ್ಲಿ ಮೂಗು ಹಾಗೂ ಬಾಯಿಂದಲೂ ರಕ್ತ ಹೊರಬಂದಿದೆ. ಕೂಡಲೇ ಇವರನ್ನು ಸ್ಥಳೀಯ ಆಸ್ಪತ್ರೆ ಹಾಗೂ ಉಪ್ಪಳದ ಆಸ್ಪತ್ರೆಗೆ ತಲುಪಿಸಿದ್ದು, ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ತಲುಪಿಸಲಾಗಿದೆ. ಆದರೆ ಅಲ್ಲಿ ವೈದ್ಯರು ತಪಾಸಣೆ ನಡೆಸಿದಾಗ ಮೃತಪಟ್ಟಿರುವುದು ದೃಢ ಪಡಿಸಿದ್ದಾರೆ. ಪ್ರಶಾಂತ್ ಈ ಹಿಂದೆ ಪುತ್ತೂರು, ಕನ್ಯಾನ ಮೊದಲಾದ ಕಡೆಗಳಲ್ಲಿ ಕೇಬಲ್ ಹಾಗೂ ಡಿಶ್ ಅಳವಡಿಸುವ ಕೆಲಸವನ್ನು ನಿರ್ವಹಿಸುತ್ತಿದ್ದು, ಇದೀಗ ಅಲ್ಪ ಸಮಯದಿಂದ ಊರಿನಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದರು. ಆರ್.ಎಸ್.ಎಸ್‍ನ ಕಾರ್ಯಕರ್ತರಾಗಿದ್ದಾರೆ. ಮಂಜೇಶ್ವರ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಶುಕ್ರವಾರ ರಾತ್ರಿ ಮನೆ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತರು ಅವಿವಾಹಿತರಾಗಿದ್ದು, ತಾಯಿ, ಸಹೋದರ ಸಹೋದರಿಯರನ್ನು ಅಗಲಿದ್ದಾರೆ.




