ಕುಂಬಳೆ: ಕೇರಳ ಹಾಗೂ ಕರ್ನಾಟಕದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾದ ಕುಕ್ಕಾರ್‍ನ ಟಿಕ್ಕಿ ಅಮ್ಮಿ ಯಾನೆ ಮುಹಮ್ಮದ್ ಅಮೀರ್ (38) ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಕುಸಿದುಬಿದ್ದ ಮುಹಮ್ಮದ್ ಅಮೀರ್‍ನನ್ನು ಕುಂಬಳೆ ಆಸ್ಪತ್ರೆಗೂ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಸಂಜೆ ವೇಳೆ ನಿಧನ ಸಂಭವಿಸಿದೆ.
ಕಳವು, ಮನೆಗೆ ದಾಳಿ, ಅಪಹರಣ, ಬಂದೂಕುತೋರಿಸಿ ಬೆದರಿಕೆಯೊಡ್ಡಿ ಹಣ ದರೋಡೆ, ಮಾದಕವಸ್ತು ಸಾಗಾಟ, ಮದ್ಯ ಸಾಗಾಟ, ಹತ್ಯೆಯತ್ನ ಸಹಿತ ಕುಂಬಳೆ ಪೋಲೀಸ್ ಠಾಣೆಯಲ್ಲಿ 10 ಪ್ರಕರಣಗಳು, ಮಂಜೇಶ್ವರದಲ್ಲಿ 4 ಪ್ರಕರಣಗಳು, ಕಾಸರಗೋಡು ಪೋಲೀಸ್ ಠಾಣೆಯಲ್ಲಿ 2 ಪ್ರಕರಣಗಳು ಮೊಹಮ್ಮದ್ ಅಮೀರ್ ವಿರುದ್ಧ ದಾಖಲಾಗಿದೆಯೆಂದು ಪೋಲೀಸರು ತಿಳಿಸಿದ್ದಾರೆ. ಶೇಕ್ ಅಲಿ-ಬೀಫಾತಿಮ ದಂಪತಿಯ ಪುತ್ರನಾದ ಮೃತನು ಪತ್ನಿ, ನಾಲ್ವರು ಮಕ್ಕಳ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.




