HEALTH TIPS

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಮುಳ್ಳೇರಿಯದಲ್ಲಿ ಅಧಿಕೃತ ಚಾಲನೆ: ಮಕ್ಕಳ ಸ್ವಭಾವ ರೂಪೀಕರಣದಲ್ಲಿ ಹೆತ್ತವರೂ, ಶಿಕ್ಷಕರೂ ಸಮಾನ ಜವಾಬ್ದಾರರು-ಡಿ.ವೈ.ಎಸ್.ಪಿ. ಸಿಬಿ ಥಾಮಸ್ ಉದ್ಘಾಟಿಸಿ ಅಭಿಮತ

 ಮುಳ್ಳೇರಿಯ: ಹೊಸ ತಲೆಮಾರಿನ ವಿದ್ಯಾರ್ಥಿಗಳ ನಿರ್ವಹಣೆ ಇಂದು ಸವಾಲಾಗುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ. ಇಂದಿನ ಮಕ್ಕಳು ಹಕ್ಕಿನ ಬಗ್ಗೆ ಮಾತನಾಡುತ್ತಾರೆಯೇ ಹೊರತು ಜವಾಬ್ದಾರಿಗಳನ್ನು ಮರೆಯುತ್ತಿರುವುದು ಕಳವಳಕಾರಿ. ಈ ನಿಟ್ಟಿನಲ್ಲಿ ಮಕ್ಕಳ ಸ್ವಭಾವ ರೂಪೀಕರಣದಲ್ಲಿ ಹೆತ್ತವರು ಮತ್ತು ಶಿಕ್ಷಕರು ಸಮಾನ ಜವಾಬ್ದಾರರು ಎಂದು ಕಾಸರಗೋಡು ಡಿ.ವೈ.ಎಸ್.ಪಿ., ಚಲನಚಿತ್ರ ನಟ ಸಿಬಿ ಥಾಮಸ್ ತಿಳಿಸಿದರು.

ಮುಳ್ಳೇರಿಯದ ಸರ್ಕಾರಿ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವನ್ನು ಗುರುವಾರ ಸಂಜೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. 


ಜನಿಸುವಾಗ ಯಾರೂ ಉತ್ತಮನೋ, ಅಧಮನೋ ಆಗಿರುವುದಿಲ್ಲ. ಬಳಿಕದ ಸಹವಾಸಗಳು, ಮನೆ ಮತ್ತು ಶಾಲೆಯ ವಾತಾವರಣಗಳು ಅವನನ್ನು ನಿರ್ಧರಿಸುತ್ತದೆ. ಈ ಹಿನ್ನೆಲೆಯಲ್ಲಿ ಧನಾತ್ಮಕ ಪರಿಸರ ನಿರ್ಮಾಣ ಮಾಡಿಕೊಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ನಿಟ್ಟಿನಲ್ಲಿ ಶಿಕ್ಷಣದೊಂದಿಗೆ ಕಲೆ, ಕ್ರೀಡೆಗಳು ವ್ಯಕ್ತಿಯನ್ನು ಬೆಳೆಸುತ್ತದೆ. ಕಲೋತ್ಸವಗಳ ಮೂಲಕ ನೂರಾರು ಯುವ ಪ್ರತಿಭೆಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಸಮರ್ಥ ಶಿಕ್ಷಕರ ನೆರವಿನೊಂದಿಗೆ, ಊರವರ ಸಹಕಾರ ದೊರೆತು ಕಲೋತ್ಸವ ಉತ್ತಮ ರೀತಿಯಲ್ಲಿ ಮೂಡಿಬರಲೆಂದು ಅವರು ಹಾರೈಸಿದರು.


ಕಲೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಇಡವೇಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯ ವ್ಯಾಪಾರಿಗಳು, ಮಕ್ಕಳ ಪೋಷಕರು, ಶಿಕ್ಷಕರು ಹಾಗೂ ವಿವಿಧ ಶಾಲೆಗಳ ಸಹಕಾರದೊಂದಿಗೆ ಆಯೋಜನೆಗೊಂಡ ಕಲೋತ್ಸವ ಸವಾಲುಗಳ ನಡುವೆಯೂ ಯಶಸ್ವಿಯಾಗುವುದು. ಮಕ್ಕಳ ಪ್ರತಿಭಾವರಣಕ್ಕೆ ಬೆಂಬಲವಾಗಿರುವ ಕೇರಳ ಶಾಲಾ ಕಲೋತ್ಸವಗಳು ಅತ್ಯಪೂರ್ವ ಕಲಾ ವೇದಿಕೆಯಾಗಿ ಏಷ್ಯಾದಲ್ಲೇ ಗುರುತಿಸಲ್ಪಟ್ಟಿರುವುದು ಅದರ ಹಿರಿಮೆಯಿಂದ ಎಂದರು.

ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಎ.ಶಶಿಧರ ಪ್ರಾಸ್ತಾವಿಕವಾಗಿ ಮಾತನಾಡಿದರುಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಕೆ.ಮೋಹನನ್, ಹೈಯರ್ ಸೆಕೆಂಡರಿ ಪ್ರಾಂಶುಪಾಲೆ ಸುಧಾ ಎ.ವಿ., ಮಾತೃಸಂಘದ ಅಧ್ಯಕ್ಷೆ ಲೀಲಾವತಿ ಎನ್., ಕೆ.ಪುರುಷೋತ್ತಮ, ಮುಳ್ಳೇರಿಯ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಗಣೇಶ ಶ್ರೀವತ್ಸ, ಕುಂಬಳೆ ಉಪಜಿಲ್ಲಾ ವಿದ್ಯಾಭ್ಯಾಸ ಮತ್ತು ಅನುದಾನಿತ ಶಾಲಾ ಪ್ರಬಂಧಕರ ಸಂಘದ ಅಧ್ಯಕ್ಷ ಜಯದೇವ ಖಂಡಿಗೆ, ಮೊಹಮ್ಮದ್ ಪಟ್ಟಾಂಗ, ವಿಜಯಕುಮಾರ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಕಲಾ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರಾಧಾ, ಒ.ಪಿ.ಹನೀಫಾ, ಶಾಲಾ ಸಂಸತ್ ಅಧ್ಯಕ್ಷೆ ವಿಸ್ಮಯ ವಿ.ಕೆ., ಶಾಲಾ ನಾಯಕ ಅಂಕಿತ್ ಎಸ್.ನಾಯರ್, ವಿಷ್ಣುಪಾಲ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.


ಮುಖ್ಯೋಪಾಧ್ಯಾಯ ಹಾಗೂ ಕಲೋತ್ಸವ ಆಯೋಜನಾ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಸ್ವಾಗತಿಸಿ, ಉಪ ಸಮಿತಿ ಅಧ್ಯಕ್ಷ ವಾರಿಜಾಕ್ಷನ್ ಕೆ. ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾಗೀತೆ ಹಾಡಿದರು. ಇದಕ್ಕೂ ಮೊದಲು ಗಜಾನನ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೇರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿಗಳ 52 ಮಂದಿ ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿಗಳಿಂದ ಸ್ವಾಗತ ಗೀತೆ ಗಮನ ಸೆಳೆಯಿತು.

ವೇದಿಕೆಯೇತರ ಕಾರ್ಯಕ್ರಮಗಳೊಂದಿಗೆ ಉಪಜಿಲ್ಲಾ ಕಲೋತ್ಸವ ನ.11 ರಿಂದ ಆರಂಭಗೊಂಡಿದೆ. 15 ರಂದು ಸಮಾರೋಪಗೊಳ್ಳಲಿದೆ. ಉಪಜಿಲ್ಲೆಯ 120ರಷ್ಟು ಶಾಲೆಗಳ 6 ಸಾವಿರದಷ್ಟು ವಿದ್ಯಾರ್ಥಿಗಳು 320 ವಿಷಯಗಳಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಅಭೂತಪೂರ್ವ ವ್ಯವಸ್ಥೆ ಮಾಡಲಾಗಿತ್ತು. ದಿನನಿತ್ಯ 4 ರಿಂದ 5 ಸಾವಿರ ಮಂದಿಗೆ ಊಟೋಪಚಾರ ವ್ಯವಸ್ಥೆ ಏರ್ಪಡಿಸಲಾಗಿದ್ದು, ಮುಳ್ಳೇರಿಯ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries