ಬದಿಯಡ್ಕ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸಬೇಕು, ಈ ನಿಟ್ಟಿನಲ್ಲಿ ಮಾತೆಯರು ಮನೆಗಳಲ್ಲಿ ಗುರುಗಳಾಗಬೇಕೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರದ 44ನೇ ವಾರ್ಷಿಕೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು.
ಮಾವಿನಕಟ್ಟೆಯು ಭಕ್ತಿಯ ಕಟ್ಟೆಯಾಗಿದೆ. ಊರಿನ ಉನ್ನತಿಗೆ ಭಜನಾಮಂದಿರಗಳು ಬೇಕು. ಅಲ್ಲಿ ಧರ್ಮದ ಅನುಷ್ಠಾನದಿಂದ ಸನಾತನ ಧರ್ಮ ಉಳಿಯುವಂತಾಗಬೇಕು. ವಿದ್ಯಾವಂತರಲ್ಲಿ ವಿನಯದ ಶಿಕ್ಷಣವೂ ತುಂಬಬೇಕು. ಧರ್ಮದ ಸಂರಕ್ಷಣೆಯು ನಮ್ಮಿಂದಲೇ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಸೇವಾ ಸಮಿತಿ ಅಧ್ಯಕ್ಷ ವಿಶ್ವನಾಥ ಬಳ್ಳಪದವು ಅಧ್ಯಕ್ಷತೆವಹಿಸಿ ಮಾತನಾಡಿದರು. ಪ್ರಧಾನ ಧಾರ್ಮಿಕ ಭಾಷಣ ಮಾಡಿದ ಆರ್‍ಎಸ್‍ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ಸಮಾಜವು ಎಲ್ಲಾ ಸಂದರ್ಭದಲ್ಲೂ ಸತ್ಯಧರ್ಮದಿಂದ ನಡೆಯಬೇಕು. ಎಲ್ಲರನ್ನೂ ಸಮಾನವಾಗಿ ನೋಡುವ ರೀತಿ ಹೋಂದಬೇಕು. ಹಿಂದೂ ಸಮಾಜದ ಪರಿವರ್ತನೆಯು ಆಚಾರ ಧರ್ಮವೂ ಕಾಲ ಕಾಲಕ್ಕೆ ತನ್ನ ಬದಲಾವಣೆಯನ್ನು ಮಾಡಿಕೊಂಡಿದೆ. ಪ್ರತಿಯೊಬ್ಬರೂ ಸಮಾಜ ಮುಖೀಯಾಗಿ ಮಕ್ಕಳನ್ನು ಬೆಳೆಸುವಂತಾಗಬೇಕು. ಭಕ್ತಿಯ ದೃಷ್ಟಿಯಿಂದ ಎಲ್ಲರೂ ಒಂದಾಗಬೇಕು. ನಮ್ಮ ಧರ್ಮ, ಸಂಸ್ಕøತಿ, ಸಮಾಜ ಹಾಗೂ ರಾಷ್ಟ್ರ ಎಂಬ ನೆಲೆಯಲ್ಲಿ ನಡೆಯಬೇಕು ಎಂಬುದಾಗಿ ಹೇಳಿದರು.
ಪೆರಿಯ ಕೇಂದ್ರ ವಿವಿಯ ಪ್ರಭಾರ ರಿಜಿಸ್ಟ್ರಾರ್ ಡಾ. ರಾಜೇಂದ್ರ ಪಿಲಾಂಕಟ್ಟೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಂದಿರದ ಗುರುಸ್ವಾಮಿ ಭಾಸ್ಕರ ಪುರುಷ, ಹಿರಿಯ ಗುರುಸ್ವಾಮಿ ಕೃಷ್ಣ ಮಣಿಯಾಣಿ, ಶಶಿಧರ ತೆಕ್ಕೆಮೂಲೆ ಮತ್ತಿತರರು ಉಪಸ್ಥಿತರಿದ್ದರು. ಆರಂಭದಲ್ಲಿ ಕೃಷ್ಣಲೀಲಾ ಬಾಲಗೋಕುಲ ವಿದ್ಯಾರ್ಥಿಗಳಿಂದ ಪ್ರಾರ್ಥನೆಯೂ, ಮಂದಿರದ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರಂಜಿತ್ ಕೋಳಾರಿಯಡ್ಕ ಸ್ವಾಗತಿಸಿದರು. ಕೆ.ಗಂಗಾಧರ್ ಕಾರ್ಯಕ್ರಮ ನಿರೂಪಿಸಿ ಮಂದಿರದ ಸೇವಾ ಸಮಿತಿ ಕೋಶಾ?ಕಾರಿ ನಾಗರಾಜ ಮಣಿಯಾಣಿ ವಂದಿಸಿದರು.
ಈ ಸಂದರ್ಭದಲ್ಲಿ ಕಳೆದ 18ವರ್ಷಗಳಿಂದ ಶಬರಿಮಲೆ ಯಾತ್ರೆಯನ್ನು ಕೈಗೊಂಡ ಗುರುಸ್ವಾಮಿಗಳಾದ ಭಾಸ್ಕರ ಪುರುಷ, ನಾಗರಾಜ ಮಣಿಯಾಣಿ, ಗಿರಿಧರ ನಡುಮೂಲೆ ಅವರನ್ನು ಸ್ವಾಮೀಜಿಯವರು ಸನ್ಮಾನಿಸಿದರು.
ಶ್ರೀಮಂದಿರದ ಹಿರಿಯ ಕಾರ್ಯಕರ್ತರಾದ ರಾಘವ ಪಳ್ಳತ್ತಮೂಲೆ, ಐತ್ತಪ್ಪ ಮಾವಿನಕಟ್ಟೆ, ಐತ್ತಪ್ಪ ಪೂಜಾರಿ ಮಾಣಿಮೂಲೆ, ಡಾ. ನಯನ ಪಿ.ಕೆ., ಜ್ಯೋತಿರ್ಲಕ್ಷ್ಮೀ ಬೀಜಂತ್ತಡ್ಕ, ಅಸ್ಮಿತಾ ಆನೆಬಾಗಿಲು ಅವರನ್ನು ಸ್ವಾಮೀಜಿಯವರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಂಗವಾಗಿ ಬೆಳಗ್ಗೆ ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಪುತ್ತೂರು ಗಾನಸಿರಿಕಲಾ ಕೇಂದ್ರದ ಡಾ. ಕಿರಣ್ ಕುಮಾರ್ ಮತ್ತು ಬಳಗದವರಿಂದ ಭಕ್ತಿ ಭಜನಾಮೃತಂ, ಸಂಜೆ ತಾಯಬಂಕ, ಭಜನೆ, ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಿಂದ ಉಲ್ಪೆ ಮೆರವಣಿಗೆಯು ತಾಲೀಮು ಪ್ರದರ್ಶನ, ವಿಶೇಷ ಸಿಡಿಮದ್ದು ಪ್ರದರ್ಶನ, ತಾಂಬೋಲ ಪ್ರದರ್ಶನ, ಕುಣಿತ ಭಜನೆಯೊಂದಿಗೆ ಆಗಮಸಿತ್ತು. ರಾತ್ರಿ ಗ್ರೀಶ್ಮ ವಿಜಯನ್ ಮತ್ತು ಸಮನ್ವಿಕಾ ಗಣೇಶ್ ಅಣಂಗೂರು ಅವರಿಂದ ಭಕ್ತಿನಾದ ತರಂಗಿಣಿ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಬಬ್ರುವಾಹನ ವೀರವರ್ಮ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತ್ತು.





